ನವದೆಹಲಿ: ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಝೊಮ್ಯಾಟೊದ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಆಹಾರ ಡಿಲಿವರಿ ಮಾಡುವ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು 90 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 700 ಕೋಟಿ ರೂ.) ಅನ್ನು ಝೊಮ್ಯಾಟೊ ಫ್ಯೂಚರ್ ಫೌಂಡೇಶನ್‌ಗೆ ದೇಣಿಗೆ ನೀಡಲಿದ್ದಾರೆ. ಕಂಪನಿಯ ಉದ್ಯೋಗಿಗಳೊಂದಿಗೆ ಹಂಚಿಕೊಂಡ ಆಂತರಿಕ ಜ್ಞಾಪಕ ಪತ್ರದಲ್ಲಿ, ಈ ರೀತಿಯಾಗಿ ಮಾಹಿತಿ ಮಾಡಲಾಗಿದೆ.
ಉದ್ಯೋಗಿಗಳ ಷೇರು ಒಡೆತನದ ಯೋಜನೆ (Employee Stock Ownership Plan-ESOP) ಮೂಲಕ ಮಕ್ಕಳ ಶಿಕ್ಷಣಕ್ಕೆ ನೀಡಲಾಗುತ್ತದೆ. ಕಳೆದ ತಿಂಗಳ ಸರಾಸರಿ ಷೇರು ಬೆಲೆಯಲ್ಲಿ,ಉದ್ಯೋಗಿಗಳ ಷೇರು ಒಡೆತನ ಯೋಜನೆಯ ಷೇರು ಮೌಲ್ಯ ಸುಮಾರು 90 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 700 ಕೋಟಿ ರೂ.) ಆಗಿದೆ ಎಂದು ಅವರು ಹೇಳಿದ್ದಾರೆ. ನಾನು ಈ ಇಎಸ್ಒಪಿಗಳಿಂದ ಬರುವ ಎಲ್ಲ ಆದಾಯವನ್ನು ಝೊಮ್ಯಾಟೊ ಫ್ಯೂಚರ್ ಫೌಂಡೇಶನ್‌ಗೆ (ZFF) ದೇಣಿಗೆ ನೀಡುತ್ತಿದ್ದೇನೆ. ಝೊಮ್ಯಾಟೊ ಫ್ಯೂಚರ್ ಫೌಂಡೇಶನ್ ಆಹಾರ ಡೆಲಿವರಿ ಮಾಡುವ ವ್ಯಕ್ತಿಗಳ ಕನಿಷ್ಠ ಎರಡು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಲಿದೆ ಎಂದಿದ್ದಾರೆ.
ಆಹಾರ ಡಿಲಿವರಿ ಮಾಡುವ ಸಿಬ್ಬಂದಿ ಕನಿಷ್ಠ 5 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರಬೇಕು. ಆಗ ಪ್ರತಿ ಮಗುವಿಗೆ ವಾರ್ಷಿಕ 50,000 ರೂಪಾಯಿವರೆಗೆ ಸಹಾಯ ನೀಡಲಾಗುತ್ತದೆ. ಒಂದು ವೇಳೆ ಆಹಾರ ಡಿಲಿವರಿ ಮಾಡುವವರು ಕಂಪನಿಯೊಂದಿಗೆ 10 ವರ್ಷಗಳನ್ನು ಪೂರ್ಣಗೊಳಿಸಿದರೆ ಈ ಮೊತ್ತವು ಪ್ರತಿ ಮಗುವಿಗೆ ವಾರ್ಷಿಕ 1 ಲಕ್ಷ ರೂಪಾಯಿಗೆ ಏರುತ್ತದೆ ಎಂದು ದೀಪಿಂದರ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.