ನವದೆಹಲಿ : ತಮ್ಮ ಸ್ಟಾಕ್ ಬ್ರೋಕರೇಜ್ ಕಂಪನಿ ಜೆರೋಧಾ ಮೌಲ್ಯವು ಅಂದಾಜು 30 ಸಾವಿರ ಕೋಟಿ ರೂಪಾಯಿಗಳಷ್ಟಾಗಬಹುದು ಎಂದು ಕಂನಿಯ ಸಹ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಗುರುವಾರ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ಜನ ಮಾತನಾಡಿಕೊಳ್ಳುತ್ತಿರುವ ಹಾಗೆ ನಮ್ಮ ಕಂಪನಿಯು 1 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ಮೌಲ್ಯ ಹೊಂದಿಲ್ಲ, ಬದಲಾಗಿ 30 ಸಾವಿರ ಕೋಟಿ ರೂ. ಮಟ್ಟದ ಮೌಲ್ಯವು ಸಮಂಜಸವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ನಾನು ಹೇಳುತ್ತಿರುವುದು ನನಗೇ ಪ್ರತಿಕೂಲವಾಗಿದೆ ಎಂದೆನಿಸಬಹುದು. ಆದರೆ ನಮ್ಮ ಕಂಪನಿಯ ಬಗೆಗಿನ ಬಹುತೇಕ ಅಂದಾಜುಗಳು ವಾಸ್ತವಕ್ಕಿಂತ ಹೆಚ್ಚಾಗಿವೆ ಎಂದು ನಾನು ಭಾವಿಸುತ್ತೇನೆ ... ಲಾಭದ ಪ್ರಮಾಣವು ಅದೃಷ್ಟದ ಆಟವಾಗಿದೆ ಮತ್ತು ಇದು ಮಾರುಕಟ್ಟೆಯ ಪರಿಸ್ಥಿತಿಗಳನ್ನು ಆಧರಿಸಿರುತ್ತದೆ." ಎಂದು ಬರೆದಿದ್ದಾರೆ.
"ಸ್ಟಾಕ್ ಬ್ರೋಕಿಂಗ್ ಮತ್ತು ಬಂಡವಾಳ ಮಾರುಕಟ್ಟೆ ವ್ಯವಹಾರಗಳು ಆವರ್ತಕವಾಗಿರುತ್ತವೆ ಮತ್ತು ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ. ಮಾರುಕಟ್ಟೆಗಳಲ್ಲಿ ಪ್ರತಿ ಬಾರಿ ಏರಿಕೆಯೊಂದು ಕಂಡು ಬಂದಾಗ ಈ ಪ್ರಕ್ರಿಯೆ ಶಾಶ್ವತವಾಗಿ ಮುಂದುವರಿಯಲಿದೆ ಎಂಬ ಭ್ರಮೆಯೊಂದು ಸೃಷ್ಟಿಯಾಗುತ್ತದೆ." ಎಂದು ನಿತಿನ್ ಹೇಳಿದ್ದಾರೆ.
"ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆಗಳನ್ನು ಗಮನಿಸಿದರೆ ನಿರಂತರವಾಗಿ ಹೆಚ್ಚಿನ ಆದಾಯ ಗಳಿಸುತ್ತಲೇ ಇರುವುದು ಸಾಧ್ಯವಿಲ್ಲ. ನಾವು ಈಗಿರುವ ಪ್ರಮಾಣದಲ್ಲಿ, ದೀರ್ಘಾವಧಿಯಲ್ಲಿ 10 ರಿಂದ 15 ಪ್ರತಿಶತದಷ್ಟು ಬೆಳೆಯಬಹುದು ಎಂದು ನಾವು ಭಾವಿಸುತ್ತೇವೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.