ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ತನ್ನ ಪೈಲಟ್ ಯೋಜನೆಯ ಭಾಗವಾಗಿ, ಅನೇಕ ಭಾರತೀಯ ಬ್ಯಾಂಕುಗಳು ಡಿಜಿಟಲ್ ರೂಪಾಯಿ ಅಪ್ಲಿಕೇಶನ್ನಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಇಂಟರ್ ಆಪರೇಬಿಲಿಟಿ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಘೋಷಿಸಿವೆ. ಇದರರ್ಥ, ಡಿಜಿಟಲ್ ರೂಪಾಯಿ ಅಪ್ಲಿಕೇಶನ್ ಬಳಕೆದಾರರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ದಿನಸಿ ಮತ್ತು ದೈನಂದಿನ ವೆಚ್ಚಗಳಿಗೆ ಪೇಮೆಂಟ್ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕೊಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್. ಎಚ್ಡಿಎಫ್ಸಿ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಇತರ ಬ್ಯಾಂಕುಗಳು ಯುಪಿಐ ಇಂಟರ್ ಆಪರೇಬಿಲಿಟಿಯನ್ನು ಆರಂಭಿಸುವಲ್ಲಿ ಮುಂಚೂಣಿಯಲ್ಲಿವೆ. ಈ ಕುರಿತು ಸೋಮವಾರ ಪ್ರಕಟಣೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, "ಈ ವೈಶಿಷ್ಟ್ಯವನ್ನು 'ಇ ರುಪೀ ಬೈ ಎಸ್ಬಿಐ' (eRupee by SBI) ಅಪ್ಲಿಕೇಶನ್ ಮೂಲಕ ಬಳಸಬಹುದಾಗಿದ್ದು, ಸಿಬಿಡಿಸಿ ಬಳಕೆದಾರರು ಯಾವುದೇ ವ್ಯಾಪಾರಿ ಯುಪಿಐ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಪಾವತಿ ಮಾಡಲು ಸಾಧ್ಯವಾಗಲಿದೆ" ಎಂದು ತಿಳಿಸಿದೆ.
ಈ ಹೊಸ ಉಪಕ್ರಮವು ಆರ್ಬಿಐನ ಸಿಬಿಡಿಸಿಯ ಬಳಕೆಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ಸಿಬಿಡಿಸಿ ಈಗ ಪ್ರಮುಖ ಭಾರತೀಯ ಬ್ಯಾಂಕುಗಳ ವಿತರಣಾ ವ್ಯವಸ್ಥೆಗಳನ್ನು ಬಳಸಲು ಸಾಧ್ಯವಾಗಲಿದೆ. "ಈ ಸಂಯೋಜನೆಯು ಡಿಜಿಟಲ್ ಕರೆನ್ಸಿ ಪರಿಸರ ವ್ಯವಸ್ಥೆಗೆ ಗೇಮ್ ಚೇಂಜರ್ ಆಗಲಿದೆ. ಈ ಕ್ರಮವು ಹೆಚ್ಚು ನಗದುರಹಿತ ಆರ್ಥಿಕತೆಯನ್ನು ವೇಗಗೊಳಿಸಲಿದೆ. ಇದರ ಮೂಲಕ ವಹಿವಾಟುಗಳನ್ನು ಸುರಕ್ಷಿತ, ಪರಿಣಾಮಕಾರಿಯಾಗಿಸುವ ಮತ್ತು ಬಳಕೆದಾರ ಸ್ನೇಹಿಯಾಗಿಸಲು ಎಸ್ಬಿಐ ಬದ್ಧವಾಗಿದೆ" ಎಂದು ಎಸ್ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.