ಬೆಂಗಳೂರು: ಜಪಾನ್, ಜರ್ಮನಿಗಳು ಮಾತ್ರವಲ್ಲದೆ ಅಮೆರಿಕವನ್ನೂ ಹಿಂದಿಕ್ಕಿ ಭಾರತವು 2075ರ ವೇಳೆಗೆ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ನ ಇತ್ತೀಚಿನ ವರದಿ ಹೇಳಿದೆ. ಪ್ರಸ್ತುತ, ಭಾರತವು ಜರ್ಮನಿ, ಜಪಾನ್, ಚೀನಾ ಮತ್ತು ಯುಎಸ್ ನಂತರ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ನಾವೀನ್ಯತೆ ಮತ್ತು ತಂತ್ರಜ್ಞಾನ, ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಹೆಚ್ಚುತ್ತಿರುವ ಕಾರ್ಮಿಕರ ಉತ್ಪಾದಕತೆಯು ಮುಂಬರುವ ವರ್ಷಗಳಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ತಿಳಿಸಿದೆ.
"ಮುಂದಿನ ಎರಡು ದಶಕಗಳಲ್ಲಿ, ಪ್ರಾದೇಶಿಕ ಆರ್ಥಿಕತೆಗಳಲ್ಲಿ ಭಾರತದ ಅವಲಂಬನೆ ಅನುಪಾತವು ಅತ್ಯಂತ ಕಡಿಮೆ ಇರುತ್ತದೆ" ಎಂದು ಗೋಲ್ಡ್‌ಮನ್ ಸ್ಯಾಚ್ಸ್ ರಿಸರ್ಚ್ನ ಭಾರತದ ಅರ್ಥಶಾಸ್ತ್ರಜ್ಞ ಸಂತನು ಸೇನಗುಪ್ತಾ ಹೇಳಿದ್ದಾರೆ. ಅವಲಂಬನೆ ಅನುಪಾತವನ್ನು ಒಟ್ಟು ದುಡಿಯುವ ವಯಸ್ಸಿನ ಜನಸಂಖ್ಯೆಯ ವಿರುದ್ಧ ಅವಲಂಬಿತರ ಸಂಖ್ಯೆಯಿಂದ ಅಳೆಯಲಾಗುತ್ತದೆ.
ಕಾರ್ಮಿಕ ಬಲವನ್ನು ದುಡಿಮೆಯಲ್ಲಿ ತೊಡಗಿಸುವುದೇ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಶಕ್ತಿಯನ್ನು ಬಳಸಿಕೊಳ್ಳುವ ಕೀಲಿ ಕೈ ಆಗಿದೆ ಸಂತನು ಹೇಳಿದರು. ಮುಂದಿನ 20 ವರ್ಷಗಳಲ್ಲಿ ದೊಡ್ಡ ಆರ್ಥಿಕತೆಗಳಲ್ಲಿ ಭಾರತವು ಕಡಿಮೆ ಅವಲಂಬನೆ ಅನುಪಾತವನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು. ಉತ್ಪಾದನೆ ಮತ್ತು ಸೇವೆಗಳಲ್ಲಿ ಸಾಮರ್ಥ್ಯವನ್ನು ಸೃಷ್ಟಿಸಲು ಖಾಸಗಿ ವಲಯಕ್ಕೆ ಇದು ಸೂಕ್ತ ಸಮಯ. ಇದರಿಂದ ದೇಶದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯವಾಗಲಿದೆ ಮತ್ತು ದೊಡ್ಡ ಪ್ರಮಾಣದ ಕಾರ್ಮಿಕ ಬಲವನ್ನು ತೊಡಗಿಸಿಕೊಳ್ಳಲಿದೆ ಎಂದು ಗೋಲ್ಡ್‌ಮನ್ ಸ್ಯಾಚ್ಸ್ ವರದಿಯಲ್ಲಿ ತಿಳಿಸಿದೆ.