ಗಾಂಧಿನಗರ (ಗುಜರಾತ್): ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಹೆಚ್ಚಿನ ಸಂಖ್ಯೆಯ ವಾಹನಗಳಿಂದಾಗಿ ವಾಯು ಮಾಲಿನ್ಯವು ಅಧಿಕವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಗರಿಷ್ಠ ಬಳಕೆಯನ್ನು ಉತ್ತೇಜಿಸುವ ನೀತಿಯನ್ನು ಪ್ರಕಟಿಸಿದೆ. ಇದು ಎಲೆಕ್ಟ್ರಿಕ್ ವಾಹನ ಚಾಲಕರಿಗೆ ಪ್ರಯೋಜನವನ್ನು ನೀಡುತ್ತದೆ. ಇದರೊಂದಿಗೆ ನಗರದ ಮಾಲಿನ್ಯವೂ ತಗ್ಗಿದೆ. ಈ ಎರಡು ಪ್ರಯೋಜನಗಳಿಂದಾಗಿ ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ.
ಗುಜರಾತ್ ಸರ್ಕಾರ 2021ರಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿದೆ. ಇದರಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಬ್ಸಿಡಿ ನೀಡಲು ಅವಕಾಶವಿದ್ದು, ಚಾರ್ಜಿಂಗ್ ಸ್ಟೇಷನ್‌ನಲ್ಲಿ ಸಬ್ಸಿಡಿ ಸಹ ಒದಗಿಸಲಾಗಿದೆ. 2024ರಲ್ಲಿ 2 ಲಕ್ಷ ಎಲೆಕ್ಟ್ರಿಕ್ ವಾಹನಗಳ ಗುರಿಯನ್ನು ನಿಗದಿಪಡಿಸಲಾಗಿದೆ. ಗಾಂಧಿನಗರದ ಸಾರಿಗೆ ಇಲಾಖೆ ಆಯುಕ್ತರಿಂದ ಬಂದ ಮಾಹಿತಿ ಪ್ರಕಾರ, ಗುಜರಾತ್‌ನ ಎಲ್ಲ ಆರ್‌ಟಿಒಗಳಲ್ಲಿ ಇದುವರೆಗೆ ಒಟ್ಟು 1,18,000ಕ್ಕೂ ಹೆಚ್ಚು ವಾಹನಗಳು ನೋಂದಣಿಯಾಗಿವೆ. ಇದರಲ್ಲಿ ಸುಮಾರು 1,06,341 ದ್ವಿಚಕ್ರ ವಾಹನಗಳು, 4,093 ತ್ರಿಚಕ್ರ ವಾಹನಗಳು, 5,646 ನಾಲ್ಕು ಚಕ್ರಗಳು ಮತ್ತು 2,000 ಇತರ ಎಲೆಕ್ಟ್ರಿಕ್ ವಾಹನಗಳು ಸೇರಿವೆ.
ಪೆಟ್ರೋಲ್-ಡೀಸೆಲ್ ವಾಹನಗಳಂತೆಯೇ ನೋಂದಣಿ ಪ್ರಕ್ರಿಯೆ: ಅಹಮದಾಬಾದ್‌ನ ಎಲೆಕ್ಟ್ರಿಕ್ ವಾಹನ ಡೀಲರ್ ಸೋಹಬ್ ಮಾತನಾಡಿ, ಪೆಟ್ರೋಲ್ ಡೀಸೆಲ್ ವಾಹನಗಳು ಆರ್‌ಟಿಒದಲ್ಲಿ ನೋಂದಾಯಿಸಲ್ಪಟ್ಟ ರೀತಿಯಲ್ಲಿಯೇ ಎಲೆಕ್ಟ್ರಿಕ್ ವಾಹನಗಳನ್ನು ನೋಂದಾಯಿಸಲಾಗುತ್ತದೆ. ಇದರಲ್ಲಿ ವಾಹನದ ಮೂಲ ಬೆಲೆಯ ಶೇ.6ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ಎಲ್ಲಾ ದಾಖಲಾತಿಗಳನ್ನು ಸರ್ಕಾರಿ ಕಾನೂನುಗಳ ಪ್ರಕಾರ ಡೀಲರ್ ಮಾಡುತ್ತಾರೆ ಎಂದರು.
ಗುಜರಾತ್‌ನಲ್ಲಿ ಸಬ್ಸಿಡಿ:ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳು ಷರತ್ತುಗಳ ಪ್ರಕಾರ ಸಬ್ಸಿಡಿಗೆ ಒಳಪಟ್ಟಿವೆ. ಷರತ್ತಿನ ಪ್ರಕಾರ, ಕಂಪನಿಯು ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದರೆ ಅದಕ್ಕೆ 3 ಬಾರಿ ಸಬ್ಸಿಡಿ ನೀಡಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ವೈಯಕ್ತಿಕ ಬಳಕೆಗಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಿದರೆ, ಒಮ್ಮೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯು ಈ ಹಿಂದೆ ಸಬ್ಸಿಡಿಯನ್ನು ಪಡೆದಿದ್ದರೆ ಆ ವ್ಯಕ್ತಿ ಮತ್ತೆ ಎಲೆಕ್ಟ್ರಿಕ್ ವಾಹನ ಸಬ್ಸಿಡಿಗೆ ಅರ್ಹನಲ್ಲ ಎಂದು ಶೋಯೆಬ್ ಪಠಾಣ್ ಹೇಳಿದರು.
ಕಿಲೋಮೀಟರ್‌ಗೆ 20 ಪೈಸೆ: ಪೆಟ್ರೋಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳು ಅಗ್ಗವಾಗಿವೆ. ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಕೇವಲ 2.5 ಯೂನಿಟ್ ವಿದ್ಯುತ್ ಬಳಸಲಾಗುತ್ತದೆ. ಆದ್ದರಿಂದ ಎಲೆಕ್ಟ್ರಿಕ್ 2 ವೀಲರ್ ಅನ್ನು 18 ರೂ.ಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಪೂರ್ಣ ಚಾರ್ಜ್ ಮಾಡಿದ ನಂತರ ವಾಹನವು 100 ಕಿಲೋಮೀಟರ್ ವರೆಗೆ ಚಲಿಸುತ್ತದೆ. ಈ ರೀತಿ ಸರಾಸರಿ ಒಂದು ಕಿಲೋಮೀಟರ್‌ಗೆ 20ರಿಂದ 25 ಪೈಸೆ ಖರ್ಚಾಗುತ್ತದೆ ಎಂದು ಮಾಹಿತಿ ನೀಡಿದರು.