ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ತೀರಿಸುವುದು ಯಾವಾಗಲೂ ಉತ್ತಮ ಅಭ್ಯಾಸವಾಗಿದೆ. ಆದರೆ ಸಾಲ ತೀರಿಸುವುದು ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ತಾತ್ಕಾಲಿಕ ಪರಿಣಾಮ ಬೀರಬಹುದು. ನೀವು ನಿಮ್ಮ ಸಾಲವನ್ನು ಸಂಪೂರ್ಣವಾಗಿ ಪಾವತಿಸಿದಾಗ ಅಥವಾ ಬ್ಯಾಲೆನ್ಸ್ ಅನ್ನು ಇತ್ಯರ್ಥಪಡಿಸಿದ ನಂತರ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದಾಗ ನಿಮ್ಮ ಕ್ರೆಡಿಟ್ ಸ್ಕೋರ್ ತಾತ್ಕಾಲಿಕವಾಗಿ ಕುಸಿಯಬಹುದು. ಸಾಲ ತೀರಿಸಿದಾಗಲೂ ಏಕೆ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆಯಾಗುತ್ತದೆ ಎಂಬುದು ಆಶ್ಚರ್ಯದ ವಿಷಯ.
ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೇಗೆ ಲೆಕ್ಕಹಾಕಲಾಗುತ್ತದೆ, ಸಾಲ ಮರುಪಾವತಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಏಕೆ ಕಡಿಮೆ ಮಾಡಬಹುದು ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಸುಧಾರಿಸಲು ನೀವು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಮೊದಲಿಗೆ ತಿಳಿಯೋಣ.
ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳು:ಸಾಲ ಮರುಪಾವತಿಯ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಏಕೆ ಕುಸಿಯಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ರೂಪಿಸುವ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಕೊಡುಗೆ ನೀಡುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
ಪೇಮೆಂಟ್ ಹಿಸ್ಟರಿ: ಇದು ನಿಮ್ಮ ಸ್ಕೋರ್ ಮೇಲೆ ಅತ್ಯಂತ ಗಣನೀಯ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಪಾವತಿಸುವುದು ಮತ್ತು ಕನಿಷ್ಠ ಬಾಕಿ ಮೊತ್ತ ಪಾವತಿ ಇದರಲ್ಲಿ ಸೇರಿವೆ.
ಸಾಲದ ಬಳಕೆ: ಇದು ಲಭ್ಯವಿರುವ ಒಟ್ಟು ಸಾಲ ಹಾಗೂ ಬಳಸಿದ ಸಾಲದ ಅನುಪಾತವಾಗಿದೆ.
ಕ್ರೆಡಿಟ್ ಹಿಸ್ಟರಿ ಕಾಲಾವಧಿ: ಇದು ನಿಮ್ಮ ಸಾಲದ ಖಾತೆಗಳ ಸರಾಸರಿ ವಯಸ್ಸನ್ನು ತೋರಿಸುತ್ತದೆ.
ಹೊಸ ಕ್ರೆಡಿಟ್: ನೀವು ಇತ್ತೀಚೆಗೆ ಎಷ್ಟು ಹೊಸ ಕ್ರೆಡಿಟ್ ಖಾತೆಗಳನ್ನು ತೆರೆದಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ.
ಕ್ರೆಡಿಟ್ ಮಿಕ್ಸ್:ನೀವು ಹೊಂದಿರುವ ವಿವಿಧ ರೀತಿಯ ಕ್ರೆಡಿಟ್ ಅನ್ನು ಮೌಲ್ಯಮಾಪನ ಮಾಡುವುದು.
ಸಾಲ ಮರುಪಾವತಿ ನಿಮ್ಮ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?: ನಿಮ್ಮ ಬಾಕಿ ಸಾಲವನ್ನು ಕಡಿಮೆ ಮಾಡಿಕೊಳ್ಳುವುದು ಯಾವಾಗಲೂ ಉತ್ತಮ. ಆದರೆ ಹೀಗೆ ಮಾಡಿದಾಗ ಕೆಲ ಕಾರಣಗಳಿಂದ ನಿಮ್ಮ ಕ್ರೆಡಿಟ್ ಸ್ಕೋರ್ ತಾತ್ಕಾಲಿಕವಾಗಿ ಕಡಿಮೆಯಾಗಬಹುದು.
ಕ್ರೆಡಿಟ್ ಬಳಕೆಯ ಅನುಪಾತ ಹೆಚ್ಚಾಗುವುದು: ಕ್ರೆಡಿಟ್ ಕಾರ್ಡ್ ಅನ್ನು ಕ್ಲೋಸ್ ಮಾಡಿದಾಗ ಅಥವಾ ಬ್ಯಾಲೆನ್ಸ್ ಪಾವತಿ ಮಾಡಿದಾಗ ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತ ಹೆಚ್ಛಾಗಬಹುದು. ಇದು ನಿಮ್ಮ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.