ನವದೆಹಲಿ:ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರ ನಿಧನದ ನಂತರ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಖಾತೆಯಲ್ಲಿರುವ ಯಾರಿಗೂ ಹಂಚಿಕೆಯಾಗದ ಒಟ್ಟು 25,000 ಕೋಟಿ ರೂ.ಗಿಂತ ಹೆಚ್ಚು ಹಣದ ಗತಿ ಏನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಯ್ ಮಂಗಳವಾರ ರಾತ್ರಿ ಮುಂಬೈನಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. ರಾಯ್ ಒಡೆತನದ ಕಂಪನಿಗಳು ಪೊಂಜಿ ಸ್ಕೀಮ್ಗಳ ಮೂಲಕ ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆರೋಪಗಳ ವಿರುದ್ಧ ಅವರು ನಿರಂತರವಾಗಿ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದರು.
ಸಹಾರಾ ಸಮೂಹದ ಎರಡು ಸಂಸ್ಥೆಗಳಾದ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿಮಿಟೆಡ್ (ಎಸ್ಐಆರ್ಇಎಲ್) ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (ಎಸ್ಎಚ್ಐಸಿಎಲ್) ಗಳು ಐಚ್ಛಿಕವಾಗಿ ಸಂಪೂರ್ಣ ಕನ್ವರ್ಟಿಬಲ್ ಬಾಂಡ್ಗಳು (ಒಎಫ್ಸಿಡಿ) ಎಂದು ಕರೆಯಲ್ಪಡುವ ಕೆಲವು ಬಾಂಡ್ಗಳ ಮೂಲಕ 3 ಕೋಟಿ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಅವರಿಗೆ ಮರುಪಾವತಿ ಮಾಡುವಂತೆ 2011ರಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶಿಸಿತ್ತು.
ಸೆಬಿಯ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಈ ಎರಡು ಸಂಸ್ಥೆಗಳು ಹಣ ಸಂಗ್ರಹಿಸಿವೆ ಎಂದು ಸೆಬಿ ತೀರ್ಪು ನೀಡಿದ ನಂತರ ಈ ಆದೇಶ ಹೊರಡಿಸಲಾಗಿತ್ತು. ಮೇಲ್ಮನವಿಗಳು ಮತ್ತು ಅಡ್ಡ ಮೇಲ್ಮನವಿಗಳ ಸುದೀರ್ಘ ಪ್ರಕ್ರಿಯೆಯ ನಂತರ, ಸುಪ್ರೀಂ ಕೋರ್ಟ್ ಆಗಸ್ಟ್ 31, 2012 ರಂದು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಶೇಕಡಾ 15ರಷ್ಟು ಬಡ್ಡಿಯೊಂದಿಗೆ ಮರುಪಾವತಿಸುವಂತೆ ಹೇಳಿ ಸೆಬಿಯ ನಿರ್ದೇಶನಗಳನ್ನು ಎತ್ತಿಹಿಡಿದಿತ್ತು.
ಹೂಡಿಕೆದಾರರಿಗೆ ಅವರ ಹಣವನ್ನು ಮರುಪಾವತಿಸಲು ಅನುಕೂಲವಾಗುವಂತೆ ಅಂದಾಜು 24,000 ಕೋಟಿ ರೂ.ಗಳನ್ನು ಸೆಬಿಯಲ್ಲಿ ಠೇವಣಿ ಇಡುವಂತೆ ಸಹಾರಾಗೆ ಆಗ ಸೂಚಿಸಲಾಗಿತ್ತು. ಆದರೆ ಶೇ 95ಕ್ಕೂ ಹೆಚ್ಚು ಹೂಡಿಕೆದಾರರ ಹಣವನ್ನು ಮರುಪಾವತಿ ಮಾಡಿರುವುದಾಗಿ ಸಹಾರಾ ಹೇಳಿತ್ತು. ಆದರೆ ಕ್ಯಾಪಿಟಲ್ ಮಾರ್ಕೆಟ್ಸ್ ರೆಗ್ಯುಲೇಟರ್ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎರಡು ಸಹಾರಾ ಗ್ರೂಪ್ ಸಂಸ್ಥೆಗಳ ಹೂಡಿಕೆದಾರರಿಗೆ 11 ವರ್ಷಗಳಲ್ಲಿ ಮರುಪಾವತಿ ಮಾಡಿದ್ದು ಕೇವಲ 138.07 ಕೋಟಿ ರೂ. ಮಾತ್ರ.