ನವದೆಹಲಿ: ಕೇಂದ್ರದ ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆಗೆ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ವಿತ್ತ ಸಚಿವರು ಎಷ್ಟರ ಮಟ್ಟಿಗೆ ಬಜೆಟ್ ಮಂಡನೆಗೆ ಕಾತುರರಾಗಿದ್ದಾರೋ ಅಷ್ಟೇ ದೇಶದ ಜನರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಜೆಟ್ ಮಂಡನೆಯೆಂದರೆ ಸುದೀರ್ಘವಾದ ಲೆಕ್ಕಾಚಾರದ ಬರವಣಿಗೆಯೊಂದನ್ನು ಹಣಕಾಸು ಸಚಿವರು ಓದುತ್ತಾರೆ. ಈ ನೀರಸವಾದ ಭಾಷಣವನ್ನು ಸ್ವಲ್ಪ ರಸವತ್ತಾಗಿ ಮಾಡಲು ವಿತ್ತ ಸಚಿವರುಗಳು ಬಜೆಟ್ ಮಂಡನೆ ಮಾಡುವ ಮೊದಲು ಕಾವ್ಯಗಳ ಅಥವಾ ವಚನಗಳ ಮೂಲಕ ಪ್ರಾರಂಭಿಸುವುದು ಹೆಚ್ಚು ಆಕರ್ಷವಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಈ ಬಜೆಟ್ ಮಂಡನೆಯನ್ನು ಕಾವ್ಯಗಳ ಮೂಲಕ ಪ್ರಾರಂಭಿಸುವುದು ಸದನದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಪಾತ್ರ ವಹಿಸಿದೆ. ಕೆಲವು ವರ್ಷಗಳ ಹಿಂದೆ ಬಜೆಟ್ ಮಂಡನೆಯೆಂದರೆ ವಿತ್ತ ಸಚಿವರು ಭವಿಷ್ಯದ ಯೋಜನೆಗಳು, ಯೋಜನೆಗಳಿಗಾಗಿ ಸರ್ಕಾರ ವ್ಯಯಿಸುವ ಹಣಕಾಸಿನ ಲೆಕ್ಕಾಚಾರದ ವರದಿಯಾಗಿರುತ್ತಿತ್ತು. ಆದರೆ 1991- 92ರ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರಿಂದ ಪ್ರಾರಂಭಿಸಿ ಕಳೆದ ಬಾರಿಯ ಬಜೆಟ್ ಮಂಡಿಸಿದ ಹಾಗೂ ಈ ವರ್ಷದ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರೆಗೆ ಈ ವಚನ, ಕಾವ್ಯಗಳನ್ನು ಓದುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿದ್ದಾರೆ.
ಒಂದಲ್ಲ ಹಲವಾರು ಬಾರಿ ನೀರಸ ಎನಿಸುವ ಕೇಂದ್ರದ ಬಜೆಟ್ಗೆ ತಮ್ಮ ಕಾವ್ಯ, ವಚನಗಳ ವಾಚನದ ಮೂಲಕ ರಸ ತುಂಬಿದ್ದಾರೆ. ಬಜೆಟ್ ಮಂಡನೆಯ ಹೊಸ್ತಿಲಲ್ಲಿರುವ ಈ ಹೊತ್ತಲ್ಲಿ, ಇದುವರೆಗೆ ತಮ್ಮ ಕಾವ್ಯ ವಾಚನದ ಮೂಲಕ ಬಜೆಟ್ನನ್ನು ಒಂದಷ್ಟು ಆಕರ್ಷಣೀಯವಾಗಿಸಿದ ಬಜೆಟ್ ಮಂಡನೆ ಮತ್ತು ವಿತ್ತ ಸಚಿವರತ್ತ ಒಂದು ನೋಟ ಇಲ್ಲಿದೆ...
ನಾಲ್ಕು ಬಾರಿ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಲ್ಲಿ ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾದ ಬಳಿಕ ಇದುವರೆಗೆ ನಾಲ್ಕು ಬಾರಿ ಬಜೆಟ್ ಮಂಡನೆ ಮಾಡಿದ್ದು, ಈ ಬಾರಿ ಐದನೇ ಬಜೆಟ್ ಮಂಡನೆಗೆ ತಯಾರಾಗಿದ್ದಾರೆ. 2022ರಲ್ಲಿ ತಮ್ಮ ನಾಲ್ಕನೇ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್, ರಾಜನಾದವನು ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಅದಕ್ಕಾಗಿ ಬೇಜವಾಬ್ದಾರಿ ಬಿಟ್ಟು ಧರ್ಮದ ಮಾರ್ಗದಲ್ಲಿ ನಡೆಯಬೇಕು. ಸರಿಯಾಗಿ ತೆರಿಗೆ ವಸೂಲಿ ಮಾಡಿ, ಅದನ್ನು ಜನರ ಕಲ್ಯಾಣಕ್ಕಾಗಿ ಸದುಪಯೋಗಪಡಿಸಿಕೊಳ್ಳಬೇಕು ಎನ್ನುವ ಭಾವಾರ್ಥವಿದ್ದ ಕಾವ್ಯದ ಭಾಗವನ್ನು ಓದಿದ್ದರು.
2021ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ಮಧ್ಯದಲ್ಲಿ ರವೀಂದ್ರನಾಥ ಠಾಗೋರರ ಕವಿತೆಯನ್ನು ವಾಚಿಸಿದ್ದರು. 'ಬೆಳಗ್ಗೆ ಕತ್ತಲಾದರೂ, ಆ ಕತ್ತಲಲ್ಲೂ ಬೆಳಕನ್ನು ಅನುಭವಿಸುವ ಹಕ್ಕಿಯೇ ನಂಬಿಕೆ.' ಎಂಬ ಕಾವ್ಯದ ಸಾಲುಗಳನ್ನು ಉದ್ಧರಿಸಿದ್ದರು. 2020ರ ಕೇಂದ್ರ ಬಜೆಟ್ ಉದ್ಘಾಟನಾ ಭಾಷಣದಲ್ಲಿ ಕಾಶ್ಮೀರಿ ಕವಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ದೀನಾನಾಥ್ ಕೌಲ್ ಅವರು ಬರೆದ ಕವನವನ್ನು ವಾಚಿಸಿದ್ದರು.
ಈ ಕವಿತೆಯು ಕಾಶ್ಮೀರದ ಶಾಲಿಮಾರ್ ಬಾಗ್ ಮತ್ತು ದಾಲ್ ಸರೋವರವನ್ನು ಉಲ್ಲೇಖಿಸುತ್ತದೆ. ಭಾರತವು ಎಲ್ಲಾ ನಾಗರಿಕರಿಗೆ ಸೇರಿದೆ ಎಂದು ಒತ್ತಿ ಹೇಳುತ್ತದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಇದು ನಡೆದಿದೆ. ಕವಿತೆಯ ಕೆಲವು ಸಾಲುಗಳು ಹೀಗಿವೆ- 'ನಮ್ಮ ದೇಶ ಶಾಲಿಮಾರ್ ಬಾಗ್ ಇದ್ದಂತೆ, ನಮ್ಮ ದೇಶ ದಾಲ್ ಸರೋವರದಲ್ಲಿ ಅರಳಿದ ಕಮಲದಂತೆ, ನಮ್ಮ ದೇಶ ಯುವಕರ ಬೆಚ್ಚಗಿನ ರಕ್ತದಂತಿದೆ, ನಮ್ಮ ದೇಶ ವಿಶ್ವದಲ್ಲೇ ಅತ್ಯಂತ ಪ್ರೀತಿಯ ದೇಶ...'