ಹೈದರಾಬಾದ್:ಉದ್ಯೋಗ ಕಳೆದುಕೊಂಡಾಗ ಅಥವಾ ವ್ಯಾಪಾರದಲ್ಲಿ ನಷ್ಟ ಉಂಟಾದಾಗ ಹಣಕಾಸಿನ ಸಮಸ್ಯೆಗಳು ಎದುರಾಗುತ್ತವೆ. ಇಂಥ ಪರಿಸ್ಥಿತಿಗಳಲ್ಲಿ ನಿಮ್ಮ ನಿಯಮಿತ ಆದಾಯ ನಿಂತು ಹೋಗುವುದರಿಂದ ಸಾಲದ ಕಂತುಗಳನ್ನು ಪಾವತಿಸುವುದು ಸಾಧ್ಯವಾಗುವುದಿಲ್ಲ. ಸಾಲದ ಬಾಕಿಗಳು ಹೆಚ್ಚಾಗಿ ನಿಮ್ಮ ಸಾಲವನ್ನು ಬ್ಯಾಡ್ ಲೋನ್ ಅಥವಾ NPA ಎಂದು ಬ್ಯಾಂಕ್‌ಗಳು ಘೋಷಿಸುವುದರಿಂದ ನೀವು ಡಿಫಾಲ್ಟರ್ ಆಗಬಹುದು. ಇಂಥ ಬಿಕ್ಕಟ್ಟಿನ ಸಮಯದಲ್ಲಿ ಸಾಲದ ಹೊರೆಗಳನ್ನು ನಿಭಾಯಿಸುವುದು ಹೇಗೆ? ಇಲ್ಲಿವೆ ಒಂದಿಷ್ಟು ಉಪಯುಕ್ತ ಸಲಹೆ.
ಉದ್ಯೋಗ ಕಡಿತದ ಸುದ್ದಿಗಳು ಮೇಲಿಂದ ಮೇಲೆ ಬರುತ್ತಿರುವುದರಿಂದ ಅನೇಕರು ತಮ್ಮ ಸಾಲದ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ಗೃಹ ಸಾಲ, ವಾಹನ ಸಾಲ, ಪರ್ಸನಲ್ ಲೋನ್, ಕ್ರೆಡಿಟ್ ಕಾರ್ಡ್ ಬಿಲ್ ಗಳು ಹೀಗೆ ಯಾವುದಾದರೊಂದು ರೀತಿಯ ಸಾಲ ಇದ್ದೇ ಇರುತ್ತದೆ. ಸಂಬಳ ಸಿಗದಿದ್ದರೆ ಇಎಂಐ ಕಟ್ಟುವುದು ಹೇಗೆ ಎಂದು ಯೋಚಿಸುವಂತಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ ಕಂತುಗಳನ್ನು ಪಾವತಿಸದಿದ್ದಾಗ, ಸಾಲಗಾರನ ವಿರುದ್ಧ ಬ್ಯಾಂಕುಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
NPA ಎಂದರೇನು?: ಯಾವುದೇ ಸಾಲಗಾರನು ಸತತ ಮೂರು ತಿಂಗಳು ಕಂತುಗಳನ್ನು ಪಾವತಿಸದಿದ್ದರೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅಂಥ ಸಾಲವನ್ನು ತಾತ್ಕಾಲಿಕ ಕೆಟ್ಟ ಸಾಲವೆಂದು ಪರಿಗಣಿಸುತ್ತವೆ. ಇಂಥ ಸಂದರ್ಭದಲ್ಲಿ ಸಾಲಗಾರನಿಗೆ ನೋಟಿಸ್ ಕಳುಹಿಸಲಾಗುತ್ತದೆ. ಕಂತುಗಳು ವಿಳಂಬವಾದಾಗ ಬ್ಯಾಂಕ್‌ಗಳು ಕಂತು ಮೊತ್ತದ 1 ರಿಂದ 2 ಪ್ರತಿಶತದಷ್ಟು ದಂಡ ಶುಲ್ಕವನ್ನು ವಿಧಿಸುತ್ತವೆ. EMI ಗಳನ್ನು 6 ತಿಂಗಳವರೆಗೆ ಪಾವತಿಸದಿದ್ದರೆ, ಬ್ಯಾಂಕ್‌ಗಳು ಅದನ್ನು ಅನುತ್ಪಾದಕ ಆಸ್ತಿ (NPA) ಎಂದು ಪರಿಗಣಿಸುತ್ತವೆ. ಸಾಲವು ಎನ್‌ಪಿಎ ಆಗಿ ಬದಲಾದಾಗ ಪರಿಸ್ಥಿತಿ ಬಿಗಿಯಾಗುತ್ತದೆ. ಆಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಪರಿಗಣಿಸುತ್ತವೆ. ಕೆಲವು ಹಣಕಾಸು ಸಂಸ್ಥೆಗಳು ತಮ್ಮ ಎನ್‌ಪಿಎಗಳನ್ನು ಮೂರನೇ ವ್ಯಕ್ತಿಗಳಿಗೆ ಹಸ್ತಾಂತರಿಸುತ್ತಿವೆ.
ಕ್ರೆಡಿಟ್ ಸ್ಕೋರ್: ಕಂತುಗಳನ್ನು ಸರಿಯಾಗಿ ಪಾವತಿಸದಿದ್ದರೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. EMI ಗಳನ್ನು ನಿಯಮಿತವಾಗಿ ಪಾವತಿ ಮಾಡದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕುಸಿಯಬಹುದು. ಪ್ರಸ್ತುತ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ರೆಪೊಗೆ ಲಿಂಕ್ ಮಾಡಿವೆ. ಇದಲ್ಲದೆ, ಸಾಲಗಾರನ ಕ್ರೆಡಿಟ್ ಸ್ಕೋರ್ ಆಧರಿಸಿ ಕೂಡ ಬಡ್ಡಿಯನ್ನು ನಿರ್ಧರಿಸಲಾಗುತ್ತದೆ. ನೀವು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಬಡ್ಡಿದರ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಬ್ಯಾಂಕ್‌ಗಳು ನಿಮ್ಮ ಸಾಲವನ್ನು ಎನ್‌ಪಿಎ ಎಂದು ತೋರಿಸಿದರೆ ನಿಮ್ಮ ವಿಶ್ವಾಸಾರ್ಹತೆ ಮತ್ತಷ್ಟು ಹಾಳಾಗುತ್ತದೆ.