ನವದೆಹಲಿ : ಡಿಜಿಟಲ್ ಮೂಲಕ ಪಡೆಯಲಾದ ಸಾಲದ ಕಂತುಗಳನ್ನು ಮರುಪಾವತಿ ಮಾಡಲು ಯುಪಿಐ ಎರಡನೇ ಅತಿ ಜನಪ್ರಿಯ ಪ್ಲಾಟ್‌ಫಾರ್ಮ್ ಆಗಿ ಹಾಗೂ ಯುವ ಸಮುದಾಯದ ಪಾಲಿಗೆ ಎಸ್ಐಪಿ (Systematic Investment Plan) ಅತ್ಯಂತ ಆದ್ಯತೆಯ ಹೂಡಿಕೆ ವಿಧಾನವಾಗಿ ಹೊರಹೊಮ್ಮಿದೆ ಎಂದು ವಿಶ್ಲೇಷಣಾ ವರದಿ ತಿಳಿಸಿದೆ. AI ಆಧರಿತ ಹಣಕಾಸು ವಿಶ್ಲೇಷಕ ಪ್ಲಾಟ್‌ಫಾರ್ಮ್ CASHe ಪ್ರಕಾರ, ಸುಮಾರು 84 ಪ್ರತಿಶತ ಮಿಲೇನಿಯಲ್‌ಗಳು ಪರ್ಸನಲ್ ಲೋನ್ಗಿಂತ ಕ್ರೆಡಿಟ್ ಲೈನ್ ಸಾಲ (14 ಪ್ರತಿಶತ) ಮತ್ತು ಬೈ ನೌ ಪೇ ಲೇಟರ್ (BNPL) (2 ಪ್ರತಿಶತ) ಆಯ್ಕೆಗಳತ್ತ ಒಲವು ಹೊಂದಿದ್ದಾರೆ.
ವರದಿಯು 5,40,000 ದಷ್ಟು ಮಿಲೇನಿಯಲ್‌ಗಳನ್ನು ಒಳಗೊಂಡಿರುವ ದತ್ತಾಂಶದ ದೊಡ್ಡ ಮಾದರಿಯಾಗಿದೆ. ಇಲ್ಲಿ ಒದಗಿಸಲಾದ ಒಳನೋಟಗಳು ನೀತಿ ನಿರೂಪಕರು, ಹಣಕಾಸು ಸಂಸ್ಥೆಗಳು ಮತ್ತು ಸಂಶೋಧಕರಿಗೆ 125 ಮಿಲಿಯನ್‌ಗಿಂತಲೂ ಹೆಚ್ಚಿನ ಸಾಲ ಸಿಗದ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರದ ಜನರ ಸಾಲ ಪಡೆಯುವಿಕೆ, ಖರ್ಚು ಮತ್ತು ಉಳಿತಾಯದ ಅಭ್ಯಾಸಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗಿವೆ CASHe ಸಂಸ್ಥಾಪಕ ಮತ್ತು ಅಧ್ಯಕ್ಷರಾದ ವಿ.ರಾಮನ್ ಕುಮಾರ್ ಹೇಳಿದರು.
ಇದಲ್ಲದೇ ಶೇಕಡಾ 49 ರಷ್ಟು ಮಿಲೇನಿಯಲ್‌ಗಳು 10,000 ರೂ.ಗಿಂತ ಕಡಿಮೆ ಇರುವ ಚಿಕ್ಕ ಸಾಲಗಳನ್ನು (ಅಲ್ಪಾವಧಿಯ, ಸಣ್ಣ ಟಿಕೆಟ್ ಗಾತ್ರದ ಸಾಲಗಳು) ಪಡೆಯಲು ಆದ್ಯತೆ ನೀಡುತ್ತಾರೆ ಎಂದು ಸಂಶೋಧನೆಗಳು ತೋರಿಸಿವೆ. ಅನಿರೀಕ್ಷಿತ ವೈದ್ಯಕೀಯ ಮತ್ತು ಮಾಸಿಕ ವೆಚ್ಚಗಳು, ಶಾಪಿಂಗ್, ಮನೆ ನವೀಕರಣ, ಶಿಕ್ಷಣ ಇತ್ಯಾದಿಗಳು ಅಲ್ಪಾವಧಿಯ ಡಿಜಿಟಲ್ ಕ್ರೆಡಿಟ್ ಪಡೆದುಕೊಳ್ಳಲು ಪ್ರಮುಖ ಎರಡು ಕಾರಣಗಳಾಗಿವೆ.
ಭಾರತದ ಎಲ್ಲ ನಗರಗಳ ಪೈಕಿ ಸಾಲದ ಬೇಡಿಕೆಯಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಹೈದರಾಬಾದ್, ಪುಣೆ, ಗಾಜಿಯಾಬಾದ್ ಮತ್ತು ಗುರುಗ್ರಾಮ್ ನಂತರದ ಸ್ಥಾನಗಳಲ್ಲಿವೆ ಎಂದು ವರದಿ ತಿಳಿಸಿದೆ. ಇದಲ್ಲದೆ ಶೇಕಡಾ 68 ರಷ್ಟು ಮಿಲೇನಿಯಲ್‌ಗಳು ಹೂಡಿಕೆ ನಿರ್ಧಾರಗಳನ್ನು ಮಾಡಲು ಹಣಕಾಸು ಸಲಹೆಗಾರರಿಂದ ಸಹಾಯ ಪಡೆಯುತ್ತಾರೆ ಎಂದು ವರದಿ ಹೇಳಿದೆ. ಆದಾಗ್ಯೂ ಶೇಕಡಾ 45 ರಷ್ಟು ಮಿಲೇನಿಯಲ್‌ಗಳು ಹೂಡಿಕೆ ನಿರ್ಧಾರಗಳನ್ನು ಮಾಡಲು ಸಾಮಾಜಿಕ ಮಾಧ್ಯಮಗಳಲ್ಲಿನ ವಿಷಯಗಳನ್ನು ನಂಬುತ್ತಾರೆ.