ಹೈದರಾಬಾದ್:ಅರ್ಜುನ್ 35 ವರ್ಷ, ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಮನೆ ಖರೀದಿಸಿದ್ದಾರೆ. ನಗರದ ಹೆಸರಾಂತ ಕಂಪನಿಯಲ್ಲಿ ತಿಂಗಳಿಗೆ 1 ಲಕ್ಷ ರೂ. ಸಂಬಳ ಇತ್ತು. ಒಂದು ಹಂತದಲ್ಲಿ ಎಲ್ಲವೂ ಸುಗಮವಾಗಿ ಸಾಗುತ್ತಿತ್ತು. ಗೃಹ ಸಾಲಕ್ಕೆ ಮಾಸಿಕ 40,000 ರೂ. ಪಾವತಿಸುತ್ತಿದ್ದರು, ವೈಯಕ್ತಿಕ ಮತ್ತು ಚಿನ್ನದ ಸಾಲಗಳನ್ನೂ ಮಾಡಿಕೊಂಡಿದ್ದರು. ಇನ್ನು ಕಾರಿನ ಸಾಲ ಎಂದು 15 ಸಾವಿರ ರೂ ಗಳನ್ನು ಪ್ರತಿ ತಿಂಗಳು ಇಎಂಎ ಪಾವತಿಸುತ್ತಿದ್ರು. ಆದರೆ, ಅವರು ಮತ್ತಷ್ಟು ಹೊರೆ ಮಾಡಿಕೊಂಡಿದ್ದರಿಂದ ಇದ್ದಕ್ಕಿದ್ದಂತೆ ತಿಂಗಳ ಖರ್ಚುಗಳನ್ನು ಪೂರೈಸಲು ಹೆಣಗಾಡಲಾರಂಭಿಸಿದರು.
ಕೆಲ ಕಾರಣಗಳಿಂದ ಅವರ ಹೂಡಿಕೆ ಸಾಮರ್ಥ್ಯ ಸಂಪೂರ್ಣವಾಗಿ ಕಡಿಮೆ ಆಯಿತು. ಹೀಗಾಗಿ ಅವರು ಸಕಾಲಿಕವಾಗಿ ಇಎಂಐಗಳನ್ನು ಪಾವತಿಸಲು ವಿಫಲವಾದರು. ಹೀಗಾಗಿ ಅವರ ಮೇಲೆ ಒತ್ತಡಗಳು ಜಾಸ್ತಿ ಆದವು.
ಇಷ್ಟಕ್ಕೆಲ್ಲ ಕಾರಣವೇನು?: ಇದು ಜಸ್ಟ್ ಅರ್ಜುನ್ ಎಂಬುವವರ ಕಥೆ. ಇಂತಹ ಹಲವು ಪ್ರಮಾದಗಳನ್ನು ಹಲವರು ಮಾಡಿಕೊಳ್ಳುತ್ತಾರೆ. ಹಣಕಾಸು ನಿರ್ವಹಣೆಯನ್ನು ಸರಿಯಾಗಿ ಮಾಡಲಾಗದೇ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಕೊಳ್ಳುತ್ತಾರೆ. ಇದರಿಂದ ಹೊರಬರಲು ಅವರಿಗೆ ಸಾಧ್ಯವಾಗುವುದಿಲ್ಲ. ಕಾರಣ ಇಷ್ಟೇ, ಅವರು ಪ್ರತಿಯೊಂದಕ್ಕೂ ಸಾಲವನ್ನು ತೆಗೆದುಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವುದೇ ಆಗಿದೆ. ಗಳಿಕೆಗೆ ಅನುಗುಣವಾಗಿ ಖರ್ಚು ಮಾಡುವ ಮೂಲ ತತ್ವವನ್ನು ನಿರ್ಲಕ್ಷಿಸಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ.
ಏನೇ ಇರಲಿ ಭವಿಷ್ಯದ ಆದಾಯವನ್ನು ಇಂದೇ ಖರ್ಚು ಮಾಡುವುದು ಈಗಿನ ಟ್ರೆಂಡ್. ಒಮ್ಮೆ ಹಣಕಾಸಿನ ಯೋಜನೆ ತಪ್ಪಿದರೆ ಮತ್ತೆ ದಾರಿಗೆ ಬರುವುದು ತುಂಬಾ ಕಷ್ಟ. ಹೀಗಾಗಿ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಬರುವ ಸಂಬಳವನ್ನು ಖರ್ಚು ಮಾಡಬೇಕಾಗಿರುವುದು ಉತ್ತಮವಾದ ಮಾರ್ಗವಾಗಿದೆ. ಯೋಚಿಸಿ- ಯೋಜಿಸಿ ಹಣಕಾಸು ನಿರ್ವಹಣೆ ಮಾಡಿದರೆ ಉತ್ತಮ ಜೀವನವನ್ನೂ ಮಾಡಬಹುದು.
ಸಾಲ ಮಾಡಿದರೆ ಖರ್ಚಿನ ತ್ಯಾಗವನ್ನೂ ಮಾಡಬೇಕು:ಸಾಲವನ್ನು ತೆಗೆದುಕೊಳ್ಳುವುದು ಸುಲಭ. ಆದರೆ, ಅದಕ್ಕೂ ಮೊದಲು, ನಾವು ಸ್ವಲ್ಪ ತ್ಯಾಗ ಮಾಡಲು ಸಿದ್ಧರಾಗಿರಬೇಕು. ಸಂಬಳ, ಲಾಭಾಂಶ, ಬಡ್ಡಿ ಮತ್ತು ಇತರ ಮೂಲಗಳಿಂದ ಖರ್ಚು ಮತ್ತು ಆದಾಯದ ನಡುವೆ ಸಮತೋಲನವನ್ನು ಸಾಧಿಸುವುದೂ ಅಷ್ಟೇ ಮುಖ್ಯ. ಅಗತ್ಯಗಳು, ಆಸೆಗಳು ಮತ್ತು ಐಷಾರಾಮಿ ಜೀವನವನ್ನು ಪ್ರತ್ಯೇಕಿಸುವುದು ಉತ್ತಮ ಹಣಕಾಸು ನಿರ್ವಹಣೆಯ ಮೊದಲ ಆದ್ಯತೆ ಆಗಬೇಕಿದೆ.
ಉತ್ತಮ ಜೀವನಕ್ಕಾಗಿ ಕೆಲವೊಮ್ಮೆ ನಾವು ನಮ್ಮ ಆಸೆಗಳನ್ನು ಮುಂದೂಡಬೇಕು. ನಾವು ನಮ್ಮ ಆರ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಐಷಾರಾಮಿ ಜೀವನಕ್ಕೆ ಮೊರೆ ಹೋಗಬಾರದು. ಒಂದೊಮ್ಮೆ ಅಂತಹ ಐಷಾರಾಮಿ ಜೀವನಕ್ಕೆ ಶರಣಾದರೆ ಸಾಲದ ಬಲೆಗೆ ಬೀಳಬೇಕಾಗುತ್ತದೆ. ಸಾಲವನ್ನು ತೆಗೆದುಕೊಳ್ಳುವ ಮೊದಲು, ಹಿಂದಿನ ಸಾಲಗಳು ಮತ್ತು ಬದ್ಧತೆಗಳ ಬಗ್ಗೆ ಸಂಪೂರ್ಣ ಪರಿಶೀಲನೆ ಮಾಡಬೇಕು.