ಬಡ್ಡಿದರಗಳು ಸ್ಥಿರವಾಗಿ ಏರುತ್ತಿವೆ. ಒಂದು ಕಾಲದಲ್ಲಿ ಶೇ.6.5ಕ್ಕೆ ಲಭ್ಯವಿದ್ದ ಗೃಹ ಸಾಲವೀಗ ಶೇ.9 ತಲುಪಿದೆ. ಸಾಲ ತೀರಿಸಲು ಹೆಚ್ಚುವರಿ ಹಣ ಬಳಸಬೇಕೇ? ಹೆಚ್ಚಿನ ಆದಾಯಕ್ಕಾಗಿ ಹೂಡಿಕೆ ಮಾಡಲು ಇದನ್ನು ಬಳಸುವುದೇ? ಈಗ ಅನೇಕರನ್ನು ಈ ಅನುಮಾನ ಕಾಡುತ್ತಿದೆ. ಅಂತಿಮವಾಗಿ ನಿರ್ಧಾರ ನಿಮ್ಮದೇ. ಆದ್ರೆ ಕೆಲವು ಮೂಲಭೂತ ತತ್ವಗಳನ್ನು ತಿಳಿದುಕೊಳ್ಳುವುದರಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.
ನಿಮ್ಮ ಆರ್ಥಿಕ ಪರಿಸ್ಥಿತಿ ಹೇಗಿದೆ?:ಸಾಲ ತೀರಿಸಲು ನಿಮ್ಮ ಬಳಿ ಇರುವ ಆಯ್ಕೆಗಳೇನು?. ಇದನ್ನು ನಿಮ್ಮ ಹಣಕಾಸಿನ ಸ್ಥಿರತೆ (ಸಾಲ್ವೆನ್ಸಿ) ಎಂದು ಕರೆಯಬಹುದು. ನಿಮ್ಮ ಆಸ್ತಿಗಳು ನಿಮ್ಮ ಹೊಣೆಗಾರಿಕೆ ಮೀರಿದರೆ, ನೀವು ಆರ್ಥಿಕವಾಗಿ ಸ್ಥಿರವಾಗಿದ್ದೀರಿ ಎಂದರ್ಥ. ಉದಾಹರಣೆಗೆ, ನfಮಗೆ 30 ಲಕ್ಷ ರೂ.ಗಳ ಗೃಹ ಸಾಲವಿದೆ ಎಂದುಕೊಳ್ಳಿ. ಆದರೆ, ನಿಮ್ಮ ಉಳಿತಾಯ ಮತ್ತು ಹೂಡಿಕೆಯ ಮೊತ್ತ ಸುಮಾರು 50 ಲಕ್ಷ ರೂಪಾಯಿ ನಿಮ್ಮ ಬಳಿಯಿದೆ ಎಂದು ತಿಳಿಯಿರಿ. ನೀವು ಉದ್ಯೋಗ ತೊರೆದರೆ ಅಥವಾ ಇತರ ತುರ್ತು ಸಂದರ್ಭದಲ್ಲಿ ನಿಮ್ಮ ಗೃಹ ಸಾಲವನ್ನು ಒಂದೇ ಪಾವತಿಯೊಂದಿಗೆ ಪಾವತಿಸುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ ಎಂಬುದನ್ನೇ ನೀವು ಆರ್ಥಿಕವಾಗಿ ಸ್ಥಿರವಾಗಿದ್ದೀರಿ ಎಂದು ಸೂಚಿಸುತ್ತದೆ.
ನಿಮ್ಮ ಈ ಸಾಮರ್ಥ್ಯವು ಆರ್ಥಿಕವಾಗಿ ನಿಮ್ಮನ್ನು ಮೊದಲು ಸಾಲ ಪಾವತಿಸುವ ಬದಲು ಹೂಡಿಕೆಗಳ ಮೇಲೆ ಹೆಚ್ಚು ಗಮನಹರಿಸಲು ಪ್ರೋತ್ಸಾಹಿಸುತ್ತದೆ. ಇಲ್ಲಿ ಇನ್ನೊಂದು ಅಂಶ ಪರಿಗಣಿಸಬೇಕು. ನಿಮ್ಮ ಸಾಲಗಳು ನಿಮ್ಮ ಆಸ್ತಿಯನ್ನು ಮೀರಿದ್ದರೂ ಸಹ ನೀವು ಯಾವುದೇ ತೊಂದರೆಯಿಲ್ಲದೆ ನಿಮ್ಮ ಆದಾಯದೊಂದಿಗೆ ಪ್ರತೀ ತಿಂಗಳು ಆ ಸಾಲದ ಕಂತುಗಳನ್ನು ಪಾವತಿಸಬಹುದೆಂದು ಭಾವಿಸಿ. ಆಗಲೂ ಸಹ ನೀವು ಹೂಡಿಕೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಆದಾಯ ಮತ್ತು ಆಸ್ತಿಯನ್ನು ಮೀರಿದ ಸಾಲಗಳನ್ನು ಆದಷ್ಟು ಬೇಗ ತೀರಿಸಲು ಪ್ರಯತ್ನಿಸಿ. ಹೆಚ್ಚಿನ ಬಡ್ಡಿಯ ಕ್ರೆಡಿಟ್ ಕಾರ್ಡ್ ಸಾಲ ಮತ್ತು ಭಾರಿ ಗೃಹ ಸಾಲಗಳನ್ನು ಪಾವತಿಸಲು ಮುಂದಾಗಿ. ಅನೇಕರು ತಮ್ಮ ಗೃಹ ಸಾಲದ ಪೂರ್ಣ ಅವಧಿಯ ಮೊದಲು ಸಾಲವನ್ನು ಪಾವತಿಸಲು ಪ್ರಯತ್ನಿಸುತ್ತಿದ್ದಾರೆ. ಸಾಲದ ಹೊರೆಯಿಂದ ಶೀಘ್ರ ಮುಕ್ತಿ ಪಡೆಯುವ ಪ್ರಯತ್ನದ ಭಾಗವಿದು. ಆದರೆ, ಕೆಲವು ಸಾಧಕ-ಬಾಧಕಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
ಉದಾಹರಣೆಗೆ, ನೀವು 20 ವರ್ಷಗಳ ಅವಧಿಗೆ 7 ಶೇಕಡಾ ಬಡ್ಡಿಯಲ್ಲಿ ರೂ.50 ಲಕ್ಷದ ಗೃಹ ಸಾಲವನ್ನು ತೆಗೆದುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಸಾಲದ ಆರಂಭದಲ್ಲಿ ರೂ.38,765 ಹೆಚ್ಚುವರಿ EMI ಪಾವತಿಸಿದರೆ, ನಿಮ್ಮ ಸಾಲದ ಅವಧಿಯು ಮೂರು ತಿಂಗಳವರೆಗೆ ಕಡಿಮೆಯಾಗುತ್ತದೆ. ಸುಮಾರು ರೂ.1.15 ಲಕ್ಷ ಬಡ್ಡಿ ಉಳಿಯುತ್ತದೆ. ಆದರೆ, ಈ ಉಳಿದ ಮೊತ್ತವನ್ನು ಸೂಚ್ಯಂಕ ನಿಧಿಯಲ್ಲಿ 12 ಪ್ರತಿಶತದಷ್ಟು ಅಂದಾಜು ಆದಾಯದೊಂದಿಗೆ ಹೂಡಿಕೆ ಮಾಡಿದರೆ, 20 ವರ್ಷಗಳಲ್ಲಿ ರೂ.3.73 ಲಕ್ಷಗಳಷ್ಟು ಲಾಭ ಗಳಿಸುವ ಸಾಧ್ಯತೆಯಿದೆ.