ಕರ್ನಾಟಕ

karnataka

ETV Bharat / business

ವಿಶ್ವದ 100 ಅತ್ಯುತ್ತಮ​ ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್​ಗೆ ಸ್ಥಾನ - etv bharat kannada

TIME Magazine: ಟೈಮ್ ಮ್ಯಾಗಜೀನ್​ನ ವಿಶ್ವದ 100 ಅತ್ಯುತ್ತಮ ಕಂಪನಿಗಳಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ.

Infosys is the only Indian company featured in the TIME
Infosys is the only Indian company featured in the TIME

By ETV Bharat Karnataka Team

Published : Sep 15, 2023, 5:20 PM IST

ನವದೆಹಲಿ: ಟೈಮ್ ಮ್ಯಾಗಜೀನ್ ಬಿಡುಗಡೆ ಮಾಡಿರುವ ವಿಶ್ವದ 100 ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ. 100ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಕಂಪನಿ ಇನ್ಪೋಸಿಸ್ ಆಗಿದೆ. ಬೆಂಗಳೂರು ಮೂಲದ ಇನ್ಪೋಸಿಸ್ ಟಾಪ್ 100 ಪಟ್ಟಿಯಲ್ಲಿ 64 ನೇ ಸ್ಥಾನದಲ್ಲಿದೆ.

"ಟೈಮ್ ಮ್ಯಾಗಜೀನ್​ನ ವಿಶ್ವದ ಅತ್ಯುತ್ತಮ ಕಂಪನಿಗಳ 2023ರ ಪಟ್ಟಿಯಲ್ಲಿ ಇನ್ಫೋಸಿಸ್ ಸ್ಥಾನ ಪಡೆದಿದೆ. ನಾವು ಅಗ್ರ 3 ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದೇವೆ ಮತ್ತು ಅಗ್ರ 100 ಜಾಗತಿಕ ಶ್ರೇಯಾಂಕಗಳಲ್ಲಿ ಭಾರತದ ಏಕೈಕ ಬ್ರಾಂಡ್ ಆಗಿದ್ದೇವೆ " ಎಂದು ಕಂಪನಿಯು ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಪೋಸ್ಟ್ ಮಾಡಿದೆ.

ಟೈಮ್ ಮತ್ತು ಸ್ಟ್ಯಾಟಿಸ್ಟಾ ಸಿದ್ಧಪಡಿಸಿದ ಈ ಪಟ್ಟಿಯಲ್ಲಿ ಜಾಗತಿಕ ಬಿಗ್ ಟೆಕ್ ಕಂಪನಿಗಳಾದ ಮೈಕ್ರೋಸಾಫ್ಟ್, ಆಪಲ್, ಆಲ್ಫಾಬೆಟ್ (ಗೂಗಲ್​ನ ಮೂಲ ಕಂಪನಿ) ಮತ್ತು ಮೆಟಾ ಅಗ್ರಸ್ಥಾನದಲ್ಲಿವೆ. ಅಕ್ಸೆಂಚರ್, ಫಿಜರ್, ಅಮೆರಿಕನ್ ಎಕ್ಸ್​ಪ್ರೆಸ್, ಬಿಎಂಡಬ್ಲ್ಯು ಗ್ರೂಪ್, ಡೆಲ್ ಟೆಕ್ನಾಲಜೀಸ್, ಲೂಯಿಸ್ ವಿಟಾನ್, ಡೆಲ್ಟಾ ಏರ್ ಲೈನ್ಸ್, ಸ್ಟಾರ್ ಬಕ್ಸ್​, ಫೋಕ್ಸ್​ವ್ಯಾಗನ್ ಗ್ರೂಪ್, ಜನರಲ್ ಮೋಟಾರ್ಸ್, ಫೋರ್ಡ್ ಮತ್ತು ಇತರ ಕಂಪನಿಗಳು ಈ ಪಟ್ಟಿಯಲ್ಲಿವೆ. ಈ ಪಟ್ಟಿಯು ಆದಾಯದ ಬೆಳವಣಿಗೆ, ಉದ್ಯೋಗಿ-ತೃಪ್ತಿ ಸಮೀಕ್ಷೆಗಳು ಮತ್ತು ಕೆಲಸದ ಪರಿಸರ, ಸಾಮಾಜಿಕ ಮತ್ತು ಕಾರ್ಪೊರೇಟ್ ಆಡಳಿತ (ಇಎಸ್ಜಿ, ಅಥವಾ ಸುಸ್ಥಿರತೆ) ದತ್ತಾಂಶದ ಸೂತ್ರವನ್ನು ಆಧರಿಸಿದೆ.

ಇನ್ಫೋಸಿಸ್ ಹೊರತುಪಡಿಸಿ ಇತರ ಏಳು ಭಾರತೀಯ ಕಂಪನಿಗಳು ಟೈಮ್ ಟಾಪ್ 750 ಕಂಪನಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿವೆ. ವಿಪ್ರೋ ಲಿಮಿಟೆಡ್ 174, ಮಹೀಂದ್ರಾ ಗ್ರೂಪ್ 210, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 248, ಎಚ್​ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ 262, ಎಚ್​ಡಿಎಫ್​ಸಿ ಬ್ಯಾಂಕ್ 418, ಡಬ್ಲ್ಯುಎನ್ಎಸ್ ಗ್ಲೋಬಲ್ ಸರ್ವೀಸಸ್ 596 ಮತ್ತು ಐಟಿಸಿ ಲಿಮಿಟೆಡ್ 672 ನೇ ಸ್ಥಾನದಲ್ಲಿದೆ. ಏತನ್ಮಧ್ಯೆ, ಇನ್ಫೋಸಿಸ್ ವಿಶ್ವದ ಅಗ್ರ ಮೂರು ವೃತ್ತಿಪರ ಸೇವಾ ಕಂಪನಿಗಳಲ್ಲಿ ಒಂದಾಗಿದೆ.

ಇನ್ಫೋಸಿಸ್ ಲಿಮಿಟೆಡ್ ಇದು ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಯಾಗಿದೆ. ಕಂಪನಿಯು ಮಾಹಿತಿ ತಂತ್ರಜ್ಞಾನ, ವ್ಯವಹಾರ ಸಲಹಾ ಮತ್ತು ಹೊರಗುತ್ತಿಗೆ ಸೇವೆಗಳನ್ನು ಒದಗಿಸುವಲ್ಲಿ ತೊಡಗಿದೆ. ಕಂಪನಿಯನ್ನು 1981 ರಲ್ಲಿ ಎನ್.ಆರ್. ನಾರಾಯಣ ಮೂರ್ತಿ ಅವರು 'ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್' ಎಂಬ ಮೂಲ ಹೆಸರಿನೊಂದಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಾಪಿಸಿದರು. ಮೂರ್ತಿ ಮತ್ತು ಅವರ ಆರು ಎಂಜಿನಿಯರ್ ಗಳ ತಂಡವು ಕಂಪನಿಯನ್ನು ಸ್ಥಾಪಿಸಲು 250 ಯುಎಸ್ ಡಾಲರ್ ಆರಂಭಿಕ ಹೂಡಿಕೆ ಮಾಡಿತ್ತು.

ಇದನ್ನೂ ಓದಿ :OTTಗಳು ಟೆಲಿಕಾಂ ಕಂಪನಿಗಳಿಗೆ ಡೇಟಾ ಟ್ರಾಫಿಕ್​ ಶುಲ್ಕ ಪಾವತಿಸಲಿ: ಟೆಲಿಕಾಂ ಕಂಪನಿಗಳ ಬೇಡಿಕೆ

ABOUT THE AUTHOR

...view details