ಬೆಂಗಳೂರು: ಈ ಬಾರಿಯ ಜಾಗತಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಹೂಡಿಕೆ ಹರಿದುಬರುತ್ತಿದ್ದು, 10 ಲಕ್ಷ ಕೋಟಿ ಬಂಡವಾಳ ಹರಿದುಬರುವ ನಿರೀಕ್ಷೆ ಇದೆ. ಇದು ಕರ್ನಾಟಕ ಉದ್ಯಮ ಸ್ನೇಹಿ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ತಿಳಿಸಿದ್ದಾರೆ.
ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2010 ರಲ್ಲಿ ನಡೆದ ಜಿಮ್ ಸಮಾವೇಶದಲ್ಲಿ 3.08 ಲಕ್ಷ ಕೋಟಿ ಬಂಡವಾಳ ಹರಿದುಬಂದಿತ್ತು. 2012 ರಲ್ಲಿ 7.06 ಲಕ್ಷ ಕೋಟಿ ರೂ. ಹರಿದುಬಂದಿತ್ತು. ಈ ವರ್ಷ ನಡೆಯುತ್ತಿರುವ ಸಮಾವೇಶದಲ್ಲಿ 10.05 ಲಕ್ಷ ಕೋಟಿಗೂ ಹೆಚ್ಚಿನ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಈ ಮೊದಲು ಈ ಸಮಾವೇಶದಿಂದ 5 ಲಕ್ಷ ಕೋಟಿ ನಿರೀಕ್ಷೆ ಇತ್ತು. ಆದರೆ ಈಗ ದುಪ್ಪಟ್ಟು ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತಿದೆ. ನಮ್ಮ ನಿರೀಕ್ಷೆ ಮೀರಿ ಬಂಡವಾಳ ಹೂಡಿಕೆ ಹರಿದುಬರುತ್ತಿದೆ. 5 ಲಕ್ಷ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಗುರಿ ಇತ್ತು ಇದು ಕೋಡ ದುಪ್ಪಟ್ಟಾಗುತ್ತಿದೆ. ನಾಳೆ ಸಂಜೆ ಒಟ್ಟು ಹೂಡಿಕೆಯಾದ ಬಂಡವಾಳದ ಪ್ರಮಾಣ, ಯಾವ ಯಾವ ವಲಯಕ್ಕೆ ಎಷ್ಟು ಹೂಡಿಕೆ, ಯಾವ ಸ್ಥಳದಲ್ಲಿ ಹೂಡಿಕೆ ಎನ್ನುವ ಕುರಿತು ಸಮಗ್ರ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಟಿ ನಡೆಸಿ ನೀಡಲಿದ್ದಾರೆ ಎಂದರು.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸಹಿ ಮಾಡಿರುವ ಪ್ರಸ್ತಾವನೆಗಳಿಗೆ ಮೂರು ತಿಂಗಳಲ್ಲಿ ಒಪ್ಪಿಗೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಎರಡನೇ ದಿನದ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಗಾಗಲೇ ಮಾಡಿರುವ ಎಲ್ಲಾ ಪ್ರಸ್ತಾವನೆಗಳನ್ನು 2.80 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಇನ್ನು ಮೂರು ತಿಂಗಳಲ್ಲಿ ಅವುಗಳನ್ನು ತೆರವು ಮಾಡಲಾಗುವುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಬೆಳೆಯಬೇಕೆಂಬ ಉದ್ದೇಶವಿರುವುದರಿಂದ ಕೈಗಾರಿಕೆಗಳಿಗೆ ಸಹಾಯ ಮಾಡಲು ಸರ್ಕಾರ ಬದ್ಧವಾಗಿದೆ. ಹೂಡಿಕೆದಾರರು ಬದ್ಧತೆಯಿಂದ ಹೂಡಿಕೆ ಮಾಡಲು ಒಲವು ತೋರಿಸಬೇಕು ಎಂದು ಮನವಿ ಮಾಡಿದರು.