ಮುಂಬೈ: ಯಾವುದೇ ಕಾರಣಕ್ಕೂ 500 ರೂಪಾಯಿ ನೋಟುಗಳನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ಆ ಪ್ರಶ್ನೆಯೂ ಇಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಈ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಮಾತು ಮುಂದುವರೆಸಿದ ಅವರು 1,000 ರೂ ಮುಖಬೆಲೆಯ ನೋಟುಗಳನ್ನು ಮರು ಪರಿಚಯಿಸುವ ಬಗ್ಗೆಯೂ ಆರ್‌ಬಿಐ ಮುಂದೆ ಯಾವುದೇ ಯೋಚನೆ ಇಲ್ಲ, ಹಾಗೆ ಯೋಚಿಸುತ್ತಿಲ್ಲ ಎಂದು ಹೇಳಿದರು.
"1,000 ರೂಪಾಯಿ ನೋಟು ಪರಿಚಯಿಸುತ್ತದೆಯೇ, 500 ರೂಪಾಯಿ ಹಿಂತೆಗೆದುಕೊಳ್ಳುತ್ತದೆಯೇ? ಎಂಬ ನಿಮ್ಮ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ" ಎಂದ ದಾಸ್, ಈ ಮೇಲಿನ ಸ್ಪಷ್ಟನೆ ನೀಡಿದರು.
"ಅದರ ಬಗ್ಗೆ ಯಾವುದೇ ಚಿಂತನೆ ಇಲ್ಲ" ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದರು. ಮಾರುಕಟ್ಟೆಯಲ್ಲಿ ಯಾವುದೇ ಊಹಾಪೋಹಗಳು ವರದಿಯಾಗಬಾರದು ಎಂದೂ ಶಕ್ತಿಕಾಂತ್ ದಾಸ್ ಹೇಳಿದರು. ದಯವಿಟ್ಟು ಯಾವುದೇ ರೀತಿಯ ಊಹಾಪೋಹಗಳಿಗೆ ಆಸ್ಪದ ನೀಡಬೇಡಿ ಎಂದು ನಾನು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕೇಂದ್ರ ಬ್ಯಾಂಕ್ಗೆ 500 ರೂ ನೋಟುಗಳನ್ನು ವಾಪಸ್ ಪಡೆಯುವುದಾಗಲಿ, 1000 ರೂ ನೋಟುಗಳನ್ನು ಜಾರಿಗೆ ತರುವ ಯೋಚನೆ ಆಗಲಿ ಇಲ್ಲ ಎಂದು ಹೇಳಲು ಬಯಸುತ್ತೇನೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಮತ್ತು ಈ ಬಗ್ಗೆ ಯಾವುದೇ ಕಲ್ಪನೆಯೂ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟ ಪಡಿಸುತ್ತೇನೆ ಎಂದರು.