ಅಮೃತಸರ್:ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮರಳುಗಣಿಗಾರಿಕೆ ನಿಲ್ಲಿಸಲಾಗಿದೆ. ಹೀಗಾಗಿರಾಜ್ಯಾದ್ಯಂತ ಮರಳು ಕೊರತೆ ಉಂಟಾಗಿದೆ. ಈ ಪರಿಣಾಮ ಕಟ್ಟಡ ನಿರ್ಮಾಣ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಅಷ್ಟೇ ಅಲ್ಲ ಅನೇಕ ವ್ಯವಹಾರಗಳಿಗೂ ಸರ್ಕಾರದ ಈ ನಿಷೇಧದಿಂದ ತೊಂದರೆಯಾಗಿದೆ.
ಮರಳು ಅಭಾವದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಹೊಸ ಪ್ಲಾನ್ ರೂಪಿಸಲು ಸನ್ನದ್ಧವಾಗಿದೆ. ಅಕ್ರಮ ಮರಳು ಸಾಗಣೆ ತಪ್ಪಿಸಲು ಹೋಮ್ ಡಿಲೇವರಿ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಪಂಜಾಬ್ನ ಸಚಿವ ಹರ್ಜೋತ್ ಸಿಂಗ್ ಬೇನ್ಸ್, ಜನರಿಗೆ ಅಗ್ಗದ ಬೆಲೆಯಲ್ಲಿ ಮರಳು ದೊರೆಯಲಿದೆ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರ ಜತೆ ಮಾತನಾಡಿರುವ ಸಚಿವರು, ಶೀಘ್ರದಲ್ಲೇ ಮರಳು ಮತ್ತು ಜಲ್ಲಿಕಲ್ಲುಗಳನ್ನು ಮನೆ ಮನೆಗೆ ತಲುಪಿಸುವ ಸೌಲಭ್ಯ ಜಾರಿಗೆ ತರುವುದಾಗಿ ಅಭಯ ನೀಡಿದ್ದಾರೆ.
ಆ್ಯಪ್ ಮೂಲಕ ಮನೆ ಮನೆಗೆ ಮರಳು: ಮರಳನ್ನು ಮನೆ ಮನೆಗೆ ತಲುಪಿಸುವ ಸಂಬಂಧ ರಾಜ್ಯದ ಆಡಳಿತ, ಎಂಜಿನಿಯರ್‌ಗಳು ಮತ್ತು ಆಕ್ಸಿಸ್ ಬ್ಯಾಂಕ್‌ನ ಕೆಲವು ಅಧಿಕಾರಿಗಳ ಜತೆಗೂಡಿ ನೂತನ ಆ್ಯಪ್ ಅಭಿವೃದ್ಧಿ ಪಡಿಸುತ್ತಿದ್ದು, ಇದರ ಯಶಸ್ವಿ ಕಾರ್ಯಾಚರಣೆಗೆ ಶ್ರಮಿಸುತ್ತಿದ್ದಾರೆ. ಈ ಅಪ್ಲಿಕೇಶನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆ್ಯಪ್ ಮೂಲಕ ಮರಳಿನ ಬೆಲೆ ಹಾಗೂ ಸಾಗಣೆ ವೆಚ್ಚವೂ ತಿಳಿಯಲಿದೆ. ಆ್ಯಪ್ ಮೂಲಕ ಆರ್ಡರ್ ಮಾಡಿದ ತಕ್ಷಣ ಮನೆ ಬಾಗಿಲಿಗೆ ಮರಳು ಬರಲಿದೆ ಎಂದು ಸಚಿವರು ವಿವರಣೆ ನೀಡಿದರು.