ನವದೆಹಲಿ: ಎಲೋನ್ ಮಸ್ಕ್ ಒಡೆತನದ ಟೆಸ್ಲಾ ಕಾರು 2024ರ ಜನವರಿಯೊಳಗೆ ಭಾರತೀಯ ರಸ್ತೆಗಿಳಿಯಲು ಸಂಬಂಧಪಟ್ಟ ಇಲಾಖೆಗಳಿಂದ ಅಗತ್ಯ ಎಲ್ಲ ಅನುಮೋದನೆಗಳನ್ನು ಒದಗಿಸುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಚುರುಕುಗೊಳಿಸುತ್ತಿದೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.
ವರದಿಗಳ ಪ್ರಕಾರ, ಟೆಸ್ಲಾ ಹೂಡಿಕೆ ಪ್ರಸ್ತಾಪ ಸೇರಿದಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನ (ಇವಿ) ಉತ್ಪಾದನೆಯ ಮುಂದಿನ ಹಂತವನ್ನು ಪರಿಶೀಲಿಸಲು ಪ್ರಧಾನಿ ಕಚೇರಿ (ಪಿಎಂಒ)ಯಲ್ಲಿ ಸೋಮವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಯಿತು ಎಂದು ವರದಿಗಳು ತಿಳಿಸಿವೆ. ಜೂನ್ನಲ್ಲಿ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಮಸ್ಕ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಸಭೆ ನಡೆದಿತ್ತು. ಇದಾದ ನಂತರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಭಾರಿ ಕೈಗಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಗಳು ಭಾರತದಲ್ಲಿ ಟೆಸ್ಲಾ ಯೋಜನೆಗಳ ಬಗ್ಗೆ ಪರಿಶೀಲನೆ ಮಾಡುತ್ತಿವೆ.
ಟೆಸ್ಲಾ ಭಾರತದಲ್ಲಿ ಬ್ಯಾಟರಿ ತಯಾರಿಕೆಯ ಕಾರ್ಖಾನೆ ಸ್ಥಾಪಿಸಲು ಸೆಪ್ಟೆಂಬರ್ನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಯೊಂದು ತಿಳಿಸಿದೆ. ಇದರ ಜೊತೆಗೆ ಮಸ್ಕ್ ಭಾರತದಲ್ಲಿ ಟೆಸ್ಲಾಗೆ ಬಿಡಿಭಾಗಗಳ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ. ಟೆಸ್ಲಾ ಈ ವರ್ಷ ಭಾರತದಿಂದ 1.9 ಬಿಲಿಯನ್ ಡಾಲರ್ ಮೌಲ್ಯದ ಆಟೋಮೊಬೈಲ್ ಬಿಡಿಭಾಗಗಳನ್ನು ಖರೀದಿಸಲು ಯೋಜಿಸುತ್ತಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.