ಹೈದರಾಬಾದ್, ತೆಲಂಗಾಣ:ಸುಂದರವಾದ ಕಾರುಗಳನ್ನು ನೋಡಿದಾಗ ಅವುಗಳು ನಮ್ಮ ಮನೆಯಲ್ಲಿರಬೇಕು ಅಂತನಿಸೋದು ಸಹಜ. ಹಾಗಂತ ನಾವು ಎಲ್ಲ ಕಾರುಗಳನ್ನು ಖರೀದಿಸಲು ಸಾಧ್ಯವೇ?. ಇಲ್ಲವಲ್ಲ. ಇಲ್ಲೊಬ್ಬ ಹುಡುಗನಿಗೆ ಕಾರು ಕ್ರೇಜ್ ಇದೆ. ಅವುಗಳನ್ನು ಖರೀದಿಸಲು ಅಸಾಧ್ಯವಾದರೂ ಅವುಗಳನ್ನು ತಾನೇ ತಯಾರಿಸಿದ್ದಾನೆ. ಅದು ಪೇಪರ್ನಲ್ಲಿ!.
ಮೇಲಿನ ಚಿತ್ರವನ್ನು ನೋಡಿದರೆ ಇದೇನು ಸಾಲಾಗಿ ಇಷ್ಟು ಕಾರುಗಳು ನಿಂತಿವೆಯಲ್ಲ ಅನ್ನಿಸಬಹುದು. ಅವೆಲ್ಲ ಪೇಪರ್ನಿಂದ ಮಾಡಿದ ಕಾರುಗಳ ಆಕೃತಿ. ತೆಲಂಗಾಣದ ಮಹೆಬೂಬ್ನಗರದ ಯುವಕ ಇವುಗಳ ಪಿತಾಮಹ. ಬಿಟೆಕ್ ಶಿಕ್ಷಣ ಪಡೆದಿರುವ ಈತನಿಗೆ ಕಾರುಗಳು ಎಂದರೆ ಪಂಚಪ್ರಾಣ. ಖರೀದಿಸಲು ಸಾಧ್ಯವಾಗದ ಕಾರಣ ಅವುಗಳನ್ನು ಪೇಪರ್ನಲ್ಲಿ ತಾನೇ ತಯಾರಿಸಿ ಖುಷಿ ಪಡುತ್ತಿದ್ದಾನೆ.
ಯುವಕ ಅನಸ್ ಫೈಝಿ ಸುಮಾರು 355 ವಿವಿಧ ಮಾದರಿಯ ಕಾರುಗಳನ್ನು ರೂಪಿಸಿದ್ದಾನೆ. ಕಾರುಗಳು ಮಾತ್ರವಲ್ಲ, ಬೈಕ್‌ಗಳು, ಪೊಲೀಸ್, ಮಿಲಿಟರಿ ವಾಹನಗಳು, ಆ್ಯಂಬುಲೆನ್ಸ್ಗಳು ಫೈಝಿಯ ಪೇಪರ್ ಗ್ಯಾರೇಜ್ನಲ್ಲಿವೆ.
ಫೈಝಿ ಬಳಿಯಿವೆ 355 ಕಾರುಗಳ ಆಕೃತಿ:ಚಿಕ್ಕವನಿದ್ದಾಗಿನಿಂದಲೂ ಫೈಝಿಗೆ ಕಾರಿನ ಬಗ್ಗೆ ಅತೀವ ಆಸೆ ಇದೆ. ನೋಡಿದಂತಹ ಕಾರುಗಳನ್ನು ಖರೀದಿಸಲು ಸಾಧ್ಯವಿಲ್ಲದ ಕಾರಣ ತಾನೇ ಕಾಗದದಿಂದ ತಯಾರಿಸಿ ಖುಷಿಪಡುತ್ತಿದ್ದಾನೆ. ಕ್ರಮೇಣ ಇದು ಹವ್ಯಾಸವಾಗಿ, 355 ಕಾರುಗಳ ಮಾದರಿಗಳನ್ನು ರೂಪಿಸಿದ್ದಾನೆ. 9 ವರ್ಷದ ವಯಸ್ಸಿನಿಂದ ಈ ಗೀಳು ಅಂಟಿಸಿಕೊಂಡಿದ್ದಾನೆ.