ಗಿಲ್ಡ್‌ಫೋರ್ಡ್ (ಇಂಗ್ಲೆಂಡ್): ಒಂದಲ್ಲ, ಎರಡಲ್ಲ 15 ವರ್ಷ ಸಿಕ್ ಲೀವ್! ಅದೂ ಕಚೇರಿಗೆ ಬಾರದೆಯೂ ಕೂಡಾ. ಹೀಗಿದ್ದೂ 65 ವರ್ಷ ಉದ್ಯೋಗದಲ್ಲಿ ಮುಂದುವರಿದಿದ್ದಾರೆ! ಯಾವುದೇ ಕೆಲಸ ಮಾಡದೇ ವರ್ಷಕ್ಕೆ 54 ಸಾವಿರ ಯುಕೆ ಪೌಂಡ್ (55.3 ಲಕ್ಷ ರೂ.) ಸಂಬಳ ಪಡೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಉದ್ಯೋಗಿಗೆ ಪ್ರಸಿದ್ಧ ಟೆಕ್ ಕಂಪನಿ ಐಬಿಎಂ ನೀಡಿದ ವಿಶೇಷ ಸೌಲಭ್ಯವಿದು. ಆದರೆ, ಈ ಉದ್ಯೋಗಿ ಕಂಪನಿ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ.
2008 ರಿಂದ ಸುದೀರ್ಘ ರಜೆಯಲ್ಲಿರುವ ಉದ್ಯೋಗಿಯ ಹೆಸರು ಇಯಾನ್ ಕ್ಲಿಫರ್ಡ್. ಇಂಗ್ಲೆಂಡ್‌ನ ಸರ್ರೆಯ ಗಿಲ್ಡ್‌ಫೋರ್ಡ್ ನಿವಾಸಿ. ಓದಿದ್ದು ಲಂಡನ್‌ನ ಕಿಂಗ್ಸ್ ಕಾಲೇಜಿನಲ್ಲಿ. 2000 ರಲ್ಲಿ ಲೋಟಸ್ ಡೆವಲಪ್ಮೆಂಟ್ ಎಂಬ ಕಂಪನಿಗೆ ಸೇರಿದರು. ಆ ಬಳಿಕ ಕಂಪನಿಯನ್ನು ಐಬಿಎಂ ಖರೀದಿಸಿದೆ. ಹಾಗಾಗಿ ಇಯಾನ್ ಕ್ಲಿಫರ್ಡ್ ಹೊಸ ಕಂಪನಿಯ ಉದ್ಯೋಗಿಯಾದರು.
ಇಯಾನ್ ಅವರು ಸೆಪ್ಟೆಂಬರ್ 2008 ರಲ್ಲಿ ಅನಾರೋಗ್ಯ ರಜೆ ತೆಗೆದುಕೊಂಡಿದ್ದರು. ಐದು ವರ್ಷಗಳ ಕಾಲ ಕೆಲಸದಿಂದ ದೂರವೇ ಉಳಿದಿದ್ದರು. ಆಗ ಅವರಿಗೆ ಸುಮಾರು 35 ವರ್ಷ ವಯಸ್ಸು. ಆದರೆ 2013ರಲ್ಲಿ ಐಬಿಎಂ ವಿರುದ್ಧವೇ ದೂರು ದಾಖಲಿಸಿದ್ದಾರೆ. ಈ ಐದು ವರ್ಷಗಳಲ್ಲಿ ವೇತನ ಹೆಚ್ಚಿಸಿಲ್ಲ, ರಜೆ ಭತ್ಯೆಯನ್ನೂ ನೀಡಿಲ್ಲ ಎನ್ನುವುದು ಅವರ ದೂರು. ಏಪ್ರಿಲ್ 2013 ರಲ್ಲಿ, ಐಬಿಎಂ ಮತ್ತು ಇಯಾನ್ ನಡುವೆ ರಾಜಿ ಸಂಧಾನ ನಡೆಯಿತು. ಅದರಂತೆ, ಕಂಪನಿಯ ಅಂಗವಿಕಲ ಯೋಜನೆಯಲ್ಲಿ ಸೇರಿಸಲು ಆಡಳಿತ ಮಂಡಳಿ ಒಪ್ಪಿಕೊಂಡಿತು.
ನಿವೃತ್ತಿವರೆಗೂ ಕೆಲಸ ಮಾಡದೆ ಸಂಬಳ!:ಐಬಿಎಂ ಯೋಜನೆ ಬಹಳ ವಿಶೇಷವಾಗಿದೆ. ಈ ಯೋಜನೆಯನ್ನು ಅಂಗವಿಕಲ ನೌಕರರ ಕಲ್ಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದರಂತೆ, ಅನಾರೋಗ್ಯದಿಂದ ಕೆಲಸ ಮಾಡಲು ಸಾಧ್ಯವಾಗದ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕುವುದಿಲ್ಲ. ಆತ ಅಥವಾ ಆಕೆ ಉದ್ಯೋಗಿಯಾಗಿಯೇ ಮುಂದುವರಿಯುತ್ತಾರೆ. ಅವರು ಕೆಲಸ ಮಾಡುವ ಅಗತ್ಯವೂ ಇಲ್ಲ. ಸಂಪೂರ್ಣ ಚೇತರಿಸಿಕೊಳ್ಳುವವರೆಗೆ/ ನಿವೃತ್ತಿಯಾಗುವವರೆಗೂ ಪಡೆದ ಸಂಬಳದ ಶೇ 75 ರಷ್ಟನ್ನು ಉದ್ಯೋಗಿಗೆ ವಿಶೇಷ ಭತ್ಯೆಯಾಗಿ ನೀಡಲಾಗುತ್ತದೆ.