ಮುಂಬೈ(ಮಹಾರಾಷ್ಟ್ರ):ಹೂಡಿಕೆದಾರರು ಕಾತರದಿಂದ ಕಾಯುತ್ತಿರುವ ಟಾಟಾ ಟೆಕ್ ಐಪಿಒ ಸಂಪೂರ್ಣ ಮಾಹಿತಿ ಬಹಿರಂಗವಾಗಿದೆ. ನವೆಂಬರ್ 22ರಂದು ಪ್ರಾರಂಭವಾಗುವ ಈ ಪಬ್ಲಿಕ್ ಇಶ್ಯೂ ನವೆಂಬರ್ 24ರಂದು ಕೊನೆಗೊಳ್ಳಲಿದೆ ಎಂದು ಕಂಪನಿ ಈಗಾಗಲೇ ಘೋಷಿಸಿದೆ. ನವೀಕರಿಸಿದ ಬೆಲೆ ಶ್ರೇಣಿ ಮತ್ತು ಕನಿಷ್ಠ ಹೂಡಿಕೆ ಸೇರಿದಂತೆ ಇತರ ಪ್ರಮುಖ ಮಾಹಿತಿ ಹೊರಬಿದ್ದಿದೆ.
ಐಪಿಒದಲ್ಲಿ ಪ್ರತಿ ಷೇರಿನ ಬೆಲೆ ಶ್ರೇಣಿಯನ್ನು ರೂ.475-500 ಎಂದು ನಿಗದಿಪಡಿಸಲಾಗಿದೆ. ಈ ಅಂದಾಜಿನಂತೆ, ಕಂಪನಿಯು ಅತ್ಯಧಿಕ ಬೆಲೆಯಲ್ಲಿ ರೂ.3,042 ಕೋಟಿ ಸಂಗ್ರಹಿಸುತ್ತದೆ. ಚಿಲ್ಲರೆ ಹೂಡಿಕೆದಾರರು ಕನಿಷ್ಠ 30 ಷೇರುಗಳನ್ನು ಖರೀದಿಸಬೇಕಾಗುತ್ತದೆ. ಇದರ ಪ್ರಕಾರ ಗರಿಷ್ಠ ಬೆಲೆಯಲ್ಲಿ ಕನಿಷ್ಠ ರೂ.15 ಸಾವಿರ ಹೂಡಿಕೆ ಮಾಡಬೇಕಿದೆ.
ಐಪಿಒದಲ್ಲಿ ಟಾಟಾ ಟೆಕ್ 6.08 ಕೋಟಿ ಷೇರುಗಳು ಲಭ್ಯವಿದೆ. ಇದು ಕಂಪನಿಯ ಪಾವತಿಸಿದ ಈಕ್ವಿಟಿ ಷೇರು ಬಂಡವಾಳದ 15 ಪ್ರತಿಶತಕ್ಕೆ ಸಮ. ಟಾಟಾ ಮೋಟಾರ್ಸ್ ಈ ಪಬ್ಲಿಕ್ ಇಶ್ಯೂ ಮೂಲಕ ತನ್ನ ಶೇ.11.4 ಪಾಲನ್ನು ಹಿಂತೆಗೆದುಕೊಳ್ಳುತ್ತಿದೆ. ಹೆಚ್ಚುವರಿಯಾಗಿ, ಆಲ್ಫಾ TC ಹೋಲ್ಡಿಂಗ್ಸ್ 2.4 ಪ್ರತಿಶತ ಮತ್ತು ಟಾಟಾ ಕ್ಯಾಪಿಟಲ್ ಗ್ರೋತ್ ಫಂಡ್-I 1.2 ಪ್ರತಿಶತವನ್ನು ಮಾರಾಟ ಮಾಡುತ್ತಿದೆ. IPO ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಆರಂಭದಲ್ಲಿ ಅವರು 9.57 ಕೋಟಿ ಷೇರುಗಳನ್ನು ಮಾರಾಟ ಮಾಡಲು ಬಯಸಿದ್ದರು. ಆದರೆ, ಇತ್ತೀಚೆಗೆ 6.08 ಕೋಟಿಗೆ ಇಳಿಕೆಯಾಗಿದೆ. ಈ ಐಪಿಒ ಸಂಪೂರ್ಣವಾಗಿ 'ಆಫರ್ ಫಾರ್ ಸೇಲ್' ಆಧಾರದ ಮೇಲೆ ನಡೆಯುತ್ತಿರುವುದರಿಂದ ಸಂಗ್ರಹವಾದ ಹಣ ಕಂಪನಿಗೆ ಸೇರುವುದಿಲ್ಲ. ಈ IPOನಲ್ಲಿ 10 ಪ್ರತಿಶತ ಪಾಲನ್ನು ಟಾಟಾ ಮೋಟಾರ್ಸ್ ಷೇರುದಾರರಿಗೆ ಪ್ರತ್ಯೇಕವಾಗಿ ಕಾಯ್ದಿರಿಸಲಾಗಿದೆ.
2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅನ್ನು ಸಾರ್ವಜನಿಕ ವಿತರಣೆಗೆ ತಂದ ನಂತರ, ಟಾಟಾ ಗ್ರೂಪ್ ಸುಮಾರು ಎರಡು ದಶಕಗಳ ನಂತರ ಮತ್ತೆ ಮತ್ತೊಂದು ಕಂಪನಿಯನ್ನು IPOಗೆ ತರುತ್ತಿದೆ. ಕಂಪನಿಯು 18 ಅಂತರರಾಷ್ಟ್ರೀಯ ವಿತರಣಾ ಕೇಂದ್ರಗಳನ್ನು ಹೊಂದಿದೆ. ಸುಮಾರು 11 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ವ್ಯವಹಾರಗಳು ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ (ER&D) ಸೇವೆಗಳು, ಡಿಜಿಟಲ್ ಎಂಟರ್‌ಪ್ರೈಸ್ ಸೇವೆಗಳು (DES), ಶಿಕ್ಷಣ ಕೊಡುಗೆಗಳು, ಮೌಲ್ಯವರ್ಧಿತ ಮರುಮಾರಾಟ ಮತ್ತು ಐ-ಉತ್ಪನ್ನಗಳ ಕೊಡುಗೆಗಳಾಗಿವೆ. ಇದು ಮುಖ್ಯವಾಗಿ ಟಾಟಾ ಮೋಟಾರ್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಟಾಟಾ ಗ್ರೂಪ್‌ನ ಇತರ ಕಂಪನಿಗಳಿಗೆ ಸೇವೆ ಸಲ್ಲಿಸುತ್ತದೆ.
TPG ಕ್ಲೈಮೇಟ್ ಒಂಬತ್ತು ಪ್ರತಿಶತ ಪಾಲು ಖರೀದಿಸಿದ ಸಮಯದಲ್ಲಿ ಟಾಟಾ ಟೆಕ್‌ನ ಮೌಲ್ಯವನ್ನು ಕೊನೆಯದಾಗಿ 16,300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಡಿಸೆಂಬರ್ 2022ಕ್ಕೆ ಕೊನೆಗೊಂಡ ಒಂಬತ್ತು ತಿಂಗಳಲ್ಲಿ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇ 15ರಷ್ಟು ಏರಿಕೆಯಾಗಿ 3,052 ಕೋಟಿ ರೂಪಾಯಿಗಳಿಗೆ ತಲುಪಿದೆ. ನಿವ್ವಳ ಲಾಭ ರೂ.407 ಕೋಟಿ ಆಗಿದೆ.
IPO ವಿವರಗಳು ಸಂಕ್ಷಿಪ್ತವಾಗಿ:
- IPO ದಿನಾಂಕಗಳು: ನವೆಂಬರ್ 22-24
- ಪ್ರತಿ ಷೇರಿನ ಮುಖಬೆಲೆ: ರೂ.2
- ಬೆಲೆ ಶ್ರೇಣಿ: ರೂ.475-500
- ಖರೀದಿಸಬೇಕಾದ ಕನಿಷ್ಠ ಷೇರುಗಳು: 30 (ಒಂದು ಲಾಟ್)
- ಕನಿಷ್ಠ ಹೂಡಿಕೆ: ರೂ.15,000 (ಗರಿಷ್ಠ ಬೆಲೆಯಲ್ಲಿ)
- ಷೇರುಗಳ ಹಂಚಿಕೆಯ ದಿನಾಂಕ: 30ನೇ ನವೆಂಬರ್
- ಮರುಪಾವತಿಯ ಪ್ರಾರಂಭ ದಿನಾಂಕ: ಡಿಸೆಂಬರ್ 1
- ಡಿಮ್ಯಾಟ್ ಖಾತೆಗೆ ಷೇರುಗಳ ವರ್ಗಾವಣೆ: ಡಿಸೆಂಬರ್ 4
- ಲಿಸ್ಟಿಂಗ್ ದಿನಾಂಕ: ಡಿಸೆಂಬರ್ 5
ಇದನ್ನೂ ಓದಿ:ಶಿಕ್ಷಕರ ತರಬೇತಿಗೆ ಭಾರತ ವಾರ್ಷಿಕ 1 ಶತಕೋಟಿ ಡಾಲರ್ ಖರ್ಚು ಮಾಡಬೇಕು: ನಾರಾಯಣ ಮೂರ್ತಿ