ನವದೆಹಲಿ:ಟಾಟಾ ಮೋಟಾರ್ಸ್ ಮತ್ತು ಪಶ್ಚಿಮಬಂಗಾಳ ಸರ್ಕಾರದ ನಡುವಿನ ಸಿಂಗೂರ್ ಘಟಕ ವ್ಯಾಜ್ಯ ಕಡೆಗೂ ಇತ್ಯರ್ಥ ಕಂಡಿದೆ. ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಸ್ಥಳಾಂತರಿಸಿದ್ದಕ್ಕಾಗಿ ಉಂಟಾದ ನಷ್ಟವನ್ನು ಭರಿಸಲು ಕೋರಿದ್ದ ಟಾಟಾ ಮೋಟಾರ್ಸ್ಗೆ, ಸಿಎಂ ಮಮತಾ ಬ್ಯಾನರ್ಜಿ ಅವರ ಸರ್ಕಾರ 766 ಕೋಟಿ ರೂಪಾಯಿ ಪರಿಹಾರವಾಗಿ ನೀಡಬೇಕು ಎಂದು ಮಧ್ಯಸ್ಥಿಕೆ ನ್ಯಾಯಮಂಡಳಿಯು ಸೋಮವಾರ ಆದೇಶಿಸಿದೆ.
ಪಶ್ಚಿಮಬಂಗಾಳದ ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ನ್ಯಾನೋ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿತ್ತು. ಆದರೆ, ಇದರ ವಿರುದ್ಧ ಅಂದಿನ ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು ಹೋರಾಟ ನಡೆಸಿದ್ದರು. ಇದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಸ್ಥಾವರವನ್ನು ಬಂದ್ ಮಾಡಿಸಲಾಗಿತ್ತು. ಆದರೆ, ಇದರ ವಿರುದ್ಧ ಟಾಟಾ ನಷ್ಟ ಪರಿಹಾರ ನೀಡಲು ಕೋರಿತ್ತು.
ಇದರ ವಿಚಾರಣೆ ನಡೆಸಿದ ಮೂವರು ಸದಸ್ಯರ ಆರ್ಬಿಟ್ರಲ್ ಟ್ರಿಬ್ಯುನಲ್ (ಮಧ್ಯಸ್ಥಿಕೆ ನ್ಯಾಯಮಂಡಳಿ) ಶೇ.11ರ ಬಡ್ಡಿ ದರದಲ್ಲಿ ಒಟ್ಟು 766 ಕೋಟಿ ರೂಪಾಯಿಗಳನ್ನು ಟಾಟಾ ಮೋಟಾರ್ಸ್ಗೆ, ಪಶ್ಚಿಮಬಂಗಾಳದ ಕೈಗಾರಿಕೆ ಮತ್ತು ಅಭಿವೃದ್ಧಿ ನಿಗಮ ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿತು.
ಪ್ರಕರಣದ ಹಿನ್ನೆಲೆ:ಟಾಟಾ ಮೋಟಾರ್ಸ್ ಸಿಂಗೂರಿನಲ್ಲಿ ನ್ಯಾನೋ ಕಾರುಗಳ ಉತ್ಪಾದನಾ ಘಟಕ ಆರಂಭಿಸಲು ಅಂದಿನ ಸಿಪಿಎಂ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಭೂಸ್ವಾಧೀನ ಪ್ರಕ್ರಿಯೆಯನ್ನೂ ನಡೆಸಿತ್ತು. 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಗಳು ಆರಂಭವಾಗಿದ್ದವು. ಆದರೆ, 2008 ರಲ್ಲಿ ಭೂ ವಿವಾದದ ವಿರುದ್ಧ ಈಗಿನ ಸಿಎಂ ಮಮತಾ ಬ್ಯಾನರ್ಜಿ ಅವರು ಹೋರಾಟ ನಡೆಸಿದ್ದರು. ರೈತರ ಭೂಮಿಯನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿ ಚಳುವಳಿ ಆರಂಭಿಸಿದ್ದರು. ಇದರಿಂದ ಅದೇ ವರ್ಷ ನ್ಯಾನೋ ಕಾರು ಉತ್ಪಾದನೆ ಘಟಕ ಸ್ಥಗಿತಗೊಂಡಿತ್ತು.