ನವದೆಹಲಿ: ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿಯ ಐಪಿಒ ಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಸ್ವಿಗ್ಗಿ ಸಹ ಸಂಸ್ಥಾಪಕ ಮತ್ತು ಸಿಇಒ ಶ್ರೀಹರ್ಷ ಮಜೆಟಿ ಹೇಳಿದ್ದಾರೆ. ಈ ವರ್ಷಾಂತ್ಯಕ್ಕೆ ಹೊರಬರಲಿರುವ ಐಪಿಒ ಮೂಲಕ 1 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹದ ಗುರಿಯನ್ನು ಸ್ವಿಗ್ಗಿ ಹಾಕಿಕೊಂಡಿದೆ.
"ನಾವು ನಮ್ಮ ಐಪಿಒಗೆ ತಯಾರಿ ನಡೆಸುತ್ತಿದ್ದೇವೆ. ಇದಕ್ಕಾಗಿ ನಾವು ಆಡಳಿತ ಮಂಡಳಿಗೆ ಈಗಾಗಲೇ ಸ್ವತಂತ್ರ ನಿರ್ದೇಶಕರನ್ನು ನೇಮಿಸಿದ್ದೇವೆ ಮತ್ತು ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿವೆ" ಎಂದು ಮಜೆಟಿ ಮನಿಕಂಟ್ರೋಲ್ಗೆ ತಿಳಿಸಿದರು.
ಐಪಿಒ ಪ್ರಕ್ರಿಯೆಗಾಗಿ ಕಂಪನಿಯು ಕೋಟಕ್ ಮಹೀಂದ್ರಾ ಕ್ಯಾಪಿಟಲ್, ಸಿಟಿ ಮತ್ತು ಜೆಪಿ ಮೋರ್ಗಾನ್, ಬೋಫಾ ಸೆಕ್ಯುರಿಟೀಸ್, ಜೆಫ್ರೀಸ್ ಸೇರಿದಂತೆ ಏಳು ಹೂಡಿಕೆ ಬ್ಯಾಂಕುಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಸ್ವಿಗ್ಗಿಯ ಪ್ರತಿಸ್ಪರ್ಧಿ ಜೊಮಾಟೊ 2021 ರಲ್ಲಿ ಐಪಿಒ ಬಿಡುಗಡೆ ಮಾಡಿತ್ತು. ಜೊಮಾಟೊವನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಮಾಡಿರುವುದು ರಿಟೇಲ್ ಹೂಡಿಕೆದಾರರ ಬಗ್ಗೆ ಮತ್ತು ಅವರು ಆಹಾರ ವಿತರಣಾ ಮಾರುಕಟ್ಟೆಯನ್ನು ಹೇಗೆ ಗ್ರಹಿಸುತ್ತಾರೆ ಎಂಬುದರ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯಲು ಸ್ವಿಗ್ಗಿಗೆ ಸಹಾಯ ಮಾಡಿದೆ ಎಂದು ಮೆಜೆಟಿ ಹೇಳಿದ್ದಾರೆ.