ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆಯಲ್ಲಿ ತಲ್ಲಣ; ಸೆನ್ಸೆಕ್ಸ್​ 796 & ನಿಫ್ಟಿ 232 ಪಾಯಿಂಟ್ಸ್​ ಕುಸಿತ

ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಇಂದು ತೀವ್ರ ಕುಸಿತ ಕಂಡು ಬಂದಿದೆ.

stock market today india wednesday
stock market today india wednesday

By ETV Bharat Karnataka Team

Published : Sep 20, 2023, 5:40 PM IST

ಮುಂಬೈ:ಭಾರತದ ಷೇರು ಮಾರುಕಟ್ಟೆಯ ಎರಡು ಪ್ರಮುಖ ಇಕ್ವಿಟಿ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಬುಧವಾರ ಸತತ ಎರಡನೇ ದಿನ ಕುಸಿದವು. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ವ್ಯಾಪಕ ಮಾರಾಟವು ದೇಶೀಯ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಾಹ್ನ 3.30 ರ ಸುಮಾರಿಗೆ, ಎಸ್ &ಪಿ ಬಿಎಸ್ಇ ಸೆನ್ಸೆಕ್ಸ್ 796 ಪಾಯಿಂಟ್ಸ್ ಅಥವಾ ಶೇಕಡಾ 1.18 ರಷ್ಟು ಕುಸಿದು 66,800.84 ಕ್ಕೆ ತಲುಪಿದ್ದರೆ, ನಿಫ್ಟಿ 231.90 ಪಾಯಿಂಟ್ಸ್ ಅಥವಾ 1.15 ಶೇಕಡಾ ಕುಸಿದು 19,901.40 ಕ್ಕೆ ತಲುಪಿದೆ.

30 ಷೇರುಗಳ ಸೆನ್ಸೆಕ್ಸ್​ನಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ (ಶೇಕಡಾ 4 ರಷ್ಟು ಕುಸಿತ), ಜೆಎಸ್​ಡಬ್ಲ್ಯೂ ಸ್ಟೀಲ್, ರಿಲಯನ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಟಾಟಾ ಸ್ಟೀಲ್ ಹೆಚ್ಚು ನಷ್ಟ ಅನುಭವಿಸಿದವು. ಮತ್ತೊಂದೆಡೆ, ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ಸನ್ ಫಾರ್ಮಾ, ಆಕ್ಸಿಸ್ ಬ್ಯಾಂಕ್ ಮತ್ತು ಎನ್ ಟಿಪಿಸಿ ಮುನ್ನಡೆ ಸಾಧಿಸಿದವು.

ಗಣೇಶ ಚತುರ್ಥಿಯ ಕಾರಣ ಮಂಗಳವಾರ ಮಾರುಕಟ್ಟೆಗಳು ಮುಚ್ಚಲ್ಪಟ್ಟಿದ್ದವು. ಹಿಂದಿನ ದಿನ ಅಂದರೆ ಸೋಮವಾರದ ವಹಿವಾಟಿನ ಮುಕ್ತಾಯದಲ್ಲಿ ಬಿಎಸ್ ಇ ಸೆನ್ಸೆಕ್ಸ್ 241 ಪಾಯಿಂಟ್ ಗಳ ಕುಸಿತ ಕಂಡು 67,596.84 ಅಂಕಗಳಿಗೆ ತಲುಪಿತ್ತು. ಮತ್ತೊಂದೆಡೆ, ನಿಫ್ಟಿ ಸುಮಾರು 60 ಪಾಯಿಂಟ್ಸ್ ಕುಸಿದು 20,133.30 ಕ್ಕೆ ತಲುಪಿತ್ತು.

ನಿಫ್ಟಿ 100 ಶೇಕಡಾ 1.11, ನಿಫ್ಟಿ 200 ಶೇಕಡಾ 0.99, ನಿಫ್ಟಿ 500 ಶೇಕಡಾ 0.93, ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 0.88 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 50 ಶೇಕಡಾ 0.71 ರಷ್ಟು ಕುಸಿದಿವೆ. ಮತ್ತೊಂದೆಡೆ, ಇಂಡಿಯಾ ವಿಕ್ಸ್ ಇಂದು ಶೇಕಡಾ 2.69 ರಷ್ಟು ಏರಿಕೆಯಾಗಿದೆ. ನಿಫ್ಟಿ ಮೆಟಲ್ ಶೇಕಡಾ 1.63, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಶೇಕಡಾ 1.49, ನಿಫ್ಟಿ ಬ್ಯಾಂಕ್ ಶೇಕಡಾ 1.29, ನಿಫ್ಟಿ ಪ್ರೈವೇಟ್ ಬ್ಯಾಂಕ್ ಶೇಕಡಾ 1.20 ಮತ್ತು ನಿಫ್ಟಿ ಪಿಎಸ್​ಯು ಬ್ಯಾಂಕ್ ಶೇಕಡಾ 1.18 ರಷ್ಟು ಕುಸಿದಿವೆ.

ಭಾರತೀಯ ರೂಪಾಯಿ ಬುಧವಾರ 19 ಪೈಸೆ ಏರಿಕೆ ಕಂಡು ಪ್ರತಿ ಡಾಲರ್​ಗೆ 83.08 ಕ್ಕೆ ತಲುಪಿದೆ. ಸೌದಿ ಅರೇಬಿಯಾ ಮತ್ತು ರಷ್ಯಾಗಳು ಕಚ್ಚಾ ತೈಲ ಪೂರೈಕೆಯಲ್ಲಿ ಕಡಿತ ಮಾಡಿರುವ ಮಧ್ಯೆ ಜಾಗತಿಕ ತೈಲ ಬೆಂಚ್​ಮಾರ್ಕ್ ಬ್ರೆಂಟ್ ಕಚ್ಚಾ ತೈಲವು ಶೇಕಡಾ 1.23 ರಷ್ಟು ಕುಸಿದು ಬ್ಯಾರೆಲ್​ಗೆ 93.18 ಡಾಲರ್​ಗೆ ತಲುಪಿದೆ.

ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ ಆರೋಪ; ಹೀರೊ ಮೋಟೊಕಾರ್ಪ್ ಸಿಎಂಡಿ ಮುಂಜಾಲ್​ ಇಡಿಯಿಂದ ವಿಚಾರಣೆ

ABOUT THE AUTHOR

...view details