ಮುಂಬೈ: ಭಾರತದ ಷೇರು ಮಾರುಕಟ್ಟೆಗಳು ಗುರುವಾರ ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ನಿಫ್ಟಿ-50 ಹಿಂದಿನ ಮುಕ್ತಾಯದ 21,654.75ಕ್ಕೆ ಹೋಲಿಸಿದರೆ ಗುರುವಾರ 21,715ರಲ್ಲಿ ಪ್ರಾರಂಭವಾಯಿತು. ದಿನದ ಮಧ್ಯದಲ್ಲಿ ನಿಫ್ಟಿ ತನ್ನ ಸಾರ್ವಕಾಲಿಕ ಗರಿಷ್ಠ 21,801.45ಕ್ಕೆ ತಲುಪಿತ್ತು. ಸೂಚ್ಯಂಕವು ಅಂತಿಮವಾಗಿ 124 ಪಾಯಿಂಟ್ ಅಥವಾ ಶೇಕಡಾ 0.57ರಷ್ಟು ಏರಿಕೆ ಕಂಡು 21,778.70ರಲ್ಲಿ ಕೊನೆಗೊಂಡಿತು.
ಬುಧವಾರದ ಮುಕ್ತಾಯವಾದ 72,038.43ಕ್ಕೆ ಹೋಲಿಸಿದರೆ ಸೆನ್ಸೆಕ್ಸ್ 72,262.67ರಲ್ಲಿ ಪ್ರಾರಂಭವಾಯಿತು ಮತ್ತು ದಿನದಲ್ಲಿ ತನ್ನ ಹೊಸ ದಾಖಲೆಯ ಗರಿಷ್ಠ 72,484.34ಕ್ಕೆ ತಲುಪಿತ್ತು. ಕೊನೆಗೆ ಸೆನ್ಸೆಕ್ಸ್ 372 ಪಾಯಿಂಟ್ ಅಥವಾ ಶೇಕಡಾ 0.52ರಷ್ಟು ಏರಿಕೆಯೊಂದಿಗೆ 72,410.38ರಲ್ಲಿ ಕೊನೆಗೊಂಡಿತು.
ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ದಿನದಲ್ಲಿ ತನ್ನ ಹೊಸ ದಾಖಲೆಯ ಗರಿಷ್ಠ 36,556.64ಕ್ಕೆ ತಲುಪಿ, ಅಂತಿಮವಾಗಿ ಶೇಕಡಾ 0.66ರಷ್ಟು ಏರಿಕೆಯಾಗಿ 36,528.19ರಲ್ಲಿ ಕೊನೆಗೊಂಡಿತು. ಬಿಎಸ್ಇ ಸ್ಮಾಲ್ಕ್ಯಾಪ್ ಸೂಚ್ಯಂಕ ಶೇಕಡಾ 0.23ರಷ್ಟು ಏರಿಕೆ ಕಂಡು 42,382.30ಕ್ಕೆ ತಲುಪಿದೆ.
ಲಾರ್ಸನ್ ಆಂಡ್ ಟೂಬ್ರೊ, ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್, ಟೈಟಾನ್, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್, ಪವರ್ ಗ್ರಿಡ್, ಎನ್ಟಿಪಿಸಿ, ಜೆಎಸ್ಡಬ್ಲ್ಯೂ, ನೆಸ್ಲೆ ಮತ್ತು ಇಂಡಸ್ಇಂಡ್ ಬ್ಯಾಂಕ್ ಸೇರಿದಂತೆ ಸುಮಾರು 360 ಷೇರುಗಳು 52 ವಾರಗಳ ಗರಿಷ್ಠ ಮಟ್ಟ ತಲುಪಿದವು.