ಮುಂಬೈ: ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಇಂದು ಸಾಕಷ್ಟು ಏರಿಳಿತ ಕಂಡು ಬಂದಿದ್ದು, ಲಾಭ ಮತ್ತು ನಷ್ಟದ ನಡುವೆ ಹೊಯ್ದಾಟ ನಡೆಯಿತು. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನಕ್ಕೆ ಹೋಲಿಸಿದರೆ ಈ ವರ್ಷ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇಕಡಾ 10 ರಷ್ಟು ಏರಿಕೆಯಾಗಿವೆ. ಇಂದಿನ ವಹಿವಾಟಿನಲ್ಲಿ ಚಂಚಲತೆ ಹೆಚ್ಚಾಗಿ ಕಂಡು ಬಂದಿದ್ದು, ದಿನದ ಕೊನೆಗೆ ಶೇರು ಮಾರುಕಟ್ಟೆಗಳು ಸಮತಟ್ಟಾಗಿ ಕೊನೆಗೊಂಡವು.
ಬಿಎಸ್ಇ ಸೆನ್ಸೆಕ್ಸ್ 79 ಪಾಯಿಂಟ್ಸ್ ಏರಿಕೆಯಾಗಿ 65,402 ಕ್ಕೆ ತಲುಪಿದ್ದರೆ, ನಿಫ್ಟಿ-50 ಆರು ಪಾಯಿಂಟ್ಸ್ ಏರಿಕೆಯಾಗಿ 19,435 ಕ್ಕೆ ತಲುಪಿದೆ. ಎಲ್ಟಿಐ ಮೈಂಡ್ಟ್ರೀ, ದಿವಿಸ್ ಲ್ಯಾಬ್ಸ್, ಇನ್ಫೋಸಿಸ್, ಎಚ್ಯುಎಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಲಾಭ ಗಳಿಸಿದ ಪ್ರಮುಖ ಶೇರುಗಳಾಗಿದ್ದರೆ, ಅದಾನಿ ಎಂಟರ್ಪ್ರೈಸಸ್, ಜೆಎಸ್ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಟಾಟಾ ಸ್ಟೀಲ್ ನಷ್ಟ ಅನುಭವಿಸಿದವು.
ವಲಯವಾರು ನೋಡುವುದಾದರೆ ಮಾಹಿತಿ ತಂತ್ರಜ್ಞಾನ ಮತ್ತು ಎಫ್ಎಂಸಿಜಿ ಹೊರತುಪಡಿಸಿ, ಇತರ ಎಲ್ಲಾ ಸೂಚ್ಯಂಕಗಳು ಇಳಿಕೆಯಲ್ಲಿ ಕೊನೆಗೊಂಡವು. ಲೋಹದ ಸೂಚ್ಯಂಕವು ಸುಮಾರು 2 ಪ್ರತಿಶತದಷ್ಟು ಕುಸಿದರೆ, ವಿದ್ಯುತ್, ರಿಯಾಲ್ಟಿ ಮತ್ತು ಪಿಎಸ್ಯು ಬ್ಯಾಂಕ್ ತಲಾ 0.5 ರಷ್ಟು ಕುಸಿದವು. ಹಾಗೆಯೇ ನಿಫ್ಟಿ ಬ್ಯಾಂಕ್ ಸೂಚ್ಯಂಕ ಕೂಡ ಹಿನ್ನಡೆ ಅನುಭವಿಸಿತು. ಇದು 108 ಪಾಯಿಂಟ್ಗಳಷ್ಟು ಕುಸಿದು 44,091 ಕ್ಕೆ ಕೊನೆಗೊಂಡಿತು. ಮಿಡ್ ಕ್ಯಾಪ್ ಸೂಚ್ಯಂಕ 66 ಪಾಯಿಂಟ್ ಕುಸಿತ ಕಂಡು 37,770 ಕ್ಕೆ ಕೊನೆಗೊಂಡಿತು.