ಮುಂಬೈ : ಭಾರತೀಯ ಷೇರು ಮಾರುಕಟ್ಟೆಯ ಮೇಲೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಹೊಂದಿರುವ ವಿಶ್ವಾಸ ಮುಂದುವರೆದಿದ್ದು, ಅವರು ಜೂನ್‌ನಲ್ಲಿ ಇಲ್ಲಿಯವರೆಗೆ 30,600 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ದೇಶದ ಸ್ಥಿರವಾದ ಸ್ಥೂಲ ಆರ್ಥಿಕ ಸ್ಥಿತಿ ಮತ್ತು ಗಟ್ಟಿಮುಟ್ಟಾದ ಕಾರ್ಪೊರೇಟ್ ಗಳಿಕೆಯ ದೃಷ್ಟಿಕೋನದ ಮೇಲೆ ಎಫ್‌ಪಿಐಗಳು ತಮ್ಮ ನಂಬಿಕೆಯನ್ನಿರಿಸಿ ಭಾರತದ ಮಾರುಕಟ್ಟೆಯಲ್ಲಿ ಅವರು ಹೂಡಿಕೆ ಮಾಡುತ್ತಿದ್ದಾರೆ.
ಹಿಂದಿನ ಒಂಬತ್ತು ತಿಂಗಳಲ್ಲಿ ಎಫ್‌ಪಿಐಗಳು ಭಾರತದ ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿ ಹೂಡಿಕೆ ಮಾಡಿದ್ದಾರೆ. ಮೇ ತಿಂಗಳಲ್ಲಿ ಈಕ್ವಿಟಿಗಳಲ್ಲಿ 43,838 ಕೋಟಿ ರೂ., ಏಪ್ರಿಲ್‌ನಲ್ಲಿ 11,631 ಕೋಟಿ ಮತ್ತು ಮಾರ್ಚ್‌ನಲ್ಲಿ 7,936 ಕೋಟಿ ರೂ.ಗಳನ್ನು ಎಫ್‌ಪಿಐಗಳು ಹೂಡಿಕೆ ಮಾಡಿದ್ದರು.
ಈ ಹಿಂದೆ ಜನವರಿಯಿಂದ ಫೆಬ್ರವರಿ ಅವಧಿಯಲ್ಲಿ ಎಫ್‌ಪಿಐಗಳು ಭಾರತದ ಮಾರುಕಟ್ಟೆಯಿಂದ 34 ಸಾವಿರ ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದರು. ಮುಂದಿನ ದಿನಗಳಲ್ಲಿ ಎಫ್ಪಿಐಗಳ ಬಂಡವಾಳ ಹರಿವಿನಲ್ಲಿ ಏರಿಳಿತವಾಗಬಹುದು. ಅಮೆರಿಕದಲ್ಲಿನ ಹಣದುಬ್ಬರವನ್ನು ಹತೋಟಿಗೆ ತರಲು ಬಡ್ಡಿದರಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗಬಹುದು ಎಂಬ ಯುಎಸ್ ಕೇಂದ್ರ ಬ್ಯಾಂಕ್ನ ನಿರ್ಧಾರ ಇದಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಕೋಟಕ್ ಸೆಕ್ಯೂರಿಟೀಸ್ನ ಈಕ್ವಿಟಿ ರಿಸರ್ಚ್ ಮುಖ್ಯಸ್ಥ (ರಿಟೇಲ್) ಶ್ರೀಕಾಂತ್ ಚೌಹಾನ್.
ಇದಲ್ಲದೆ, ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸುವುದರಿಂದ ಹೂಡಿಕೆದಾರರಿಗೆ, ವಿಶೇಷವಾಗಿ ಎಫ್‌ಪಿಐಗಳಿಗೆ ಮುನ್ನೆಚ್ಚರಿಕೆ ಗಂಟೆಯಾಗಬಹುದು. ಏಕೆಂದರೆ ಭಾರತೀಯ ಮಾರುಕಟ್ಟೆಗಳ ಹೆಚ್ಚುತ್ತಿರುವ ಮೌಲ್ಯಮಾಪನವು ಅವರಿಗೆ ಸವಾಲಾಗಬಹುದು ಎಂದು ಅವರು ಹೇಳಿದರು. ಅಂಕಿಅಂಶಗಳ ಪ್ರಕಾರ, ಜೂನ್ 1-23 ರ ಅವಧಿಯಲ್ಲಿ ಎಫ್‌ಪಿಐಗಳು ಭಾರತೀಯ ಷೇರುಗಳಲ್ಲಿ 30,664 ಕೋಟಿ ರೂಪಾಯಿಗಳ ನಿವ್ವಳ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.