ಮುಂಬೈ (ಮಹಾರಾಷ್ಟ್ರ):ಜಾಗತಿಕ ಆತಂಕಗಳು ಮತ್ತು ಗಾಜಾದಲ್ಲಿನ ಉದ್ವಿಗ್ನತೆಗಳು ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಬೀರಿದ್ದರಿಂದ ಇಂದಿನ (ಸೋಮವಾರ) ಷೇರು ಮಾರುಕಟ್ಟೆಯು ಕುಸಿತದೊಂದಿಗೆ ಆರಂಭಿಸಿತು. ಸೋಮವಾರದಂದು ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕೆಳಮಟ್ಟದಲ್ಲಿ ಪ್ರಾರಂಭವಾದವು. ನಿಫ್ಟಿ ವ್ಯಾಪ್ತಿಯಲ್ಲಿ ಬರುವ ಕಂಪನಿಗಳ ಷೇರುಗಳಲ್ಲಿ ಕುಸಿತ ಉಂಟಾಯಿತು. ವಹಿವಾಟಿನ ಆರಂಭದಲ್ಲಿ, ಬೆಳಗ್ಗೆ ಸೆನ್ಸೆಕ್ಸ್ 494.23 ಪಾಯಿಂಟ್‌ಗಳ ಕುಸಿತದೊಂದಿಗೆ 65,486.61 ಕ್ಕೆ ಪ್ರಾರಂಭವಾಯಿತು.
ಅದೇ ಸಮಯದಲ್ಲಿ, ನಿಫ್ಟಿ 161.45 ಪಾಯಿಂಟ್‌ಗಳ ಕೆಳಗೆ ತೆರೆದು 19,492.05 ನಲ್ಲಿ ವಹಿವಾಟು ಆರಂಭಿಸಿತು. ದಿನದ ಪ್ರಾರಂಭದಲ್ಲಿ, ಮಾರುಕಟ್ಟೆಯು ಧನಾತ್ಮಕ ಆವೇಗವನ್ನು ಮರಳಿ ಪಡೆಯಲು ತೀವ್ರ ಪ್ರಯಾಸ ಅನುಭವಿಸಿತು. ಕೇವಲ 6 ನಿಫ್ಟಿ ಕಂಪನಿಗಳು ಮುನ್ನಡೆದವು ಮತ್ತು 44 ಕಂಪನಿಗಳು ಕುಸಿತ ಕಂಡವು. ಗಮನಾರ್ಹ ಲಾಭ ಗಳಿಸಿದವರಲ್ಲಿ ಒಎನ್‌ಜಿಸಿ, ಎಚ್‌ಸಿಎಲ್ ಟೆಕ್ನಾಲಜೀಸ್, ಟಿಸಿಎಸ್, ಡಿವಿಸ್ ಲ್ಯಾಬ್ ಮತ್ತು ಡಾ.ರೆಡ್ಡಿ, ಅದಾನಿ ಪೋರ್ಟ್ಸ್, ಬಿಪಿಸಿಎಲ್, ಟಾಟಾ ಸ್ಟೀಲ್, ಅದಾನಿ ಎಂಟರ್‌ಪ್ರೈಸಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ನಷ್ಟವನ್ನು ದಾಖಲಿಸಿವೆ.
ಜಾಗತಿಕ ಅನಿಶ್ಚಿತತೆಗಳು, ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ. ಡಾಲರ್ ಎದುರು ರೂಪಾಯಿ 83.23ಕ್ಕೆ ಪ್ರಾರಂಭವಾಯಿತು. ಸೆನ್ಸೆಕ್ಸ್ 30 ಸೂಚ್ಯಂಕದಲ್ಲಿ ಎಚ್‌ಸಿಎಲ್ ಟೆಕ್, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳು ಲಾಭದಲ್ಲಿವೆ. ಟಾಟಾ ಸ್ಟೀಲ್, ಎಸ್‌ಬಿಐ, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಪವರ್‌ಗ್ರಿಡ್, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ಟೈಟಾನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ಸ್ ಷೇರುಗಳು ಟಾಪ್ ಲೂಸರ್‌ಗಳಾಗಿವೆ.