ಮುಂಬೈ: ಐಟಿ ದಿಗ್ಗಜ ಟಿಸಿಎಸ್ ಮತ್ತು ಇನ್ಫೋಸಿಸ್ನ ತ್ರೈಮಾಸಿಕ ಫಲಿತಾಂಶಗಳಿಗೆ ಮುಂಚಿತವಾಗಿ ಭಾರತದ ಬೆಂಚ್ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಜನವರಿ 11 ರಂದು ಸ್ವಲ್ಪ ಏರಿಕೆಯೊಂದಿಗೆ ಕೊನೆಗೊಂಡಿವೆ. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 63.47 ಪಾಯಿಂಟ್ ಅಥವಾ ಶೇಕಡಾ 0.09 ರಷ್ಟು ಏರಿಕೆಯಾಗಿ 71,721.18 ಕ್ಕೆ ತಲುಪಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್ 341.76 ಪಾಯಿಂಟ್ ಅಥವಾ ಶೇಕಡಾ 0.47 ರಷ್ಟು ಏರಿಕೆಯಾಗಿ 71,999.47 ಗೆ ತಲುಪಿತ್ತು. ನಿಫ್ಟಿ 28.50 ಪಾಯಿಂಟ್ ಅಥವಾ ಶೇಕಡಾ 0.13 ರಷ್ಟು ಏರಿಕೆಯಾಗಿ 21,647.20 ಕ್ಕೆ ಮುಟ್ಟಿತ್ತು.
ಸೆನ್ಸೆಕ್ಸ್ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್, ಅಲ್ಟ್ರಾಟೆಕ್ ಸಿಮೆಂಟ್, ಆಕ್ಸಿಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಮೋಟಾರ್ಸ್, ಟೆಕ್ ಮಹೀಂದ್ರಾ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ವಿಪ್ರೋ, ಲಾರ್ಸನ್ ಅಂಡ್ ಟೂಬ್ರೊ ಮತ್ತು ನೆಸ್ಲೆ ನಷ್ಟ ಅನುಭವಿಸಿದ ಷೇರುಗಳಾಗಿವೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ಟೋಕಿಯೊ, ಶಾಂಘೈ ಮತ್ತು ಹಾಂಕಾಂಗ್ ಲಾಭದೊಂದಿಗೆ ಸ್ಥಿರಗೊಂಡರೆ, ಸಿಯೋಲ್ ಕೆಳಮಟ್ಟದಲ್ಲಿ ಕೊನೆಗೊಂಡಿತು. ಯುರೋಪಿಯನ್ ಮಾರುಕಟ್ಟೆಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿವೆ. ಅಮೆರಿಕ ಮಾರುಕಟ್ಟೆಗಳು ಜನವರಿ 10 ರಂದು ಏರಿಕೆಯಲ್ಲಿ ಕೊನೆಗೊಂಡವು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಬುಧವಾರ 1,721.35 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಅಂಕಿ ಅಂಶಗಳು ತಿಳಿಸಿವೆ.
ಅಮೆರಿಕದ ಕರೆನ್ಸಿ ಬಲವರ್ಧನೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಏರಿಕೆಯ ಹಿನ್ನೆಲೆಯಲ್ಲಿ ರೂಪಾಯಿ ಗುರುವಾರ ಡಾಲರ್ ವಿರುದ್ಧ ಕೇವಲ 1 ಪೈಸೆ ನಷ್ಟದೊಂದಿಗೆ 83.04 ರಲ್ಲಿ (ತಾತ್ಕಾಲಿಕ) ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ರೂಪಾಯಿ 83.05 ರಲ್ಲಿ ಪ್ರಾರಂಭವಾಯಿತು ಮತ್ತು ಇಂಟ್ರಾ - ಡೇ ವ್ಯವಹಾರಗಳ ಸಮಯದಲ್ಲಿ ಡಾಲರ್ ವಿರುದ್ಧ ಗರಿಷ್ಠ 82.93 ಮತ್ತು ಕನಿಷ್ಠ ಮಟ್ಟ 83.08 ರ ನಡುವೆ ವಹಿವಾಟು ನಡೆಸಿತು. ಅಂತಿಮವಾಗಿ ಡಾಲರ್ ವಿರುದ್ಧ 83.04 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು. ಇದು ಹಿಂದಿನ ಮುಕ್ತಾಯದ ಮಟ್ಟಕ್ಕಿಂತ ಕೇವಲ 1 ಪೈಸೆ ಕಡಿಮೆಯಾಗಿದೆ. ಜಾಗತಿಕ ತೈಲ ಬೆಂಚ್ಮಾರ್ಕ್ ಬ್ರೆಂಟ್ ಕ್ರೂಡ್ ತೈಲ ಶೇಕಡಾ 1.56 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 78 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : ಬಿಟ್ಕಾಯಿನ್ ಇಟಿಎಫ್ ಷೇರು ವಹಿವಾಟಿಗೆ ಕೊನೆಗೂ ಅನುಮತಿ ನೀಡಿದ ಯುಎಸ್