ನವದೆಹಲಿ: ಶುಕ್ರವಾರದ ಬೆಳಗಿನ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಜೊಮ್ಯಾಟೊ ಲಿಮಿಟೆಡ್ ಕಂಪನಿಯ ಶೇರುಗಳು ಶೇ 14 ರಷ್ಟು ಏರಿಕೆ ದಾಖಲಿಸಿವೆ. 2023-24ನೇ ಸಾಲಿನ ಏಪ್ರಿಲ್ನಿಂದ ಜೂನ್ ತ್ರೈಮಾಸಿಕದಲ್ಲಿ ಇದೇ ಮೊದಲ ಬಾರಿಗೆ 2 ಕೋಟಿ ರೂಪಾಯಿ ತೆರಿಗೆಯ ನಂತರದ ಏಕೀಕೃತ ಲಾಭವಾಗಿದೆ ಎಂದು ಕಂಪನಿ ಗುರುವಾರ ಘೋಷಿಸಿದ ನಂತರ ಶೇರು ಬೆಲೆಗಳಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ಬಿಎಸ್‌ಇಯಲ್ಲಿ ಜೊಮ್ಯಾಟೊ ಶೇರು ಮೌಲ್ಯ ಶೇಕಡಾ 14.11 ರಷ್ಟು ಏರಿಕೆಯಾಗಿ 52 ವಾರಗಳ ಗರಿಷ್ಠ 98.39 ರೂ.ಗೆ ತಲುಪಿದೆ.
ಇನ್ನು ಎನ್ಎಸ್ಇಯಲ್ಲಿ ಶೇರು ಮೌಲ್ಯ ಶೇ 13.69 ರಷ್ಟು ಏರಿಕೆಯಾಗಿ 52 ವಾರಗಳ ಗರಿಷ್ಠವಾದ 98.40 ರೂ.ಗೆ ತಲುಪಿದೆ. ಬೆಳಗಿನ ವಹಿವಾಟಿನಲ್ಲಿ ಬಿಎಸ್ಇ ಯಲ್ಲಿ 70.26 ಲಕ್ಷ ಷೇರುಗಳು ಮತ್ತು ಎನ್ಎಸ್ಇನಲ್ಲಿ 19.30 ಕೋಟಿ ಷೇರುಗಳು ವಹಿವಾಟು ನಡೆಸಿವೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 186 ಕೋಟಿ ರೂ. ನಷ್ಟ ತೋರಿಸಿತ್ತು.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ 2,416 ಕೋಟಿ ರೂ. ಏಕೀಕೃತ ಆದಾಯ ಬಂದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 1,414 ಕೋಟಿ ರೂ. ಏಕೀಕೃತ ಆದಾಯ ಬಂದಿತ್ತು. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಇದ್ದ ಒಟ್ಟು ವೆಚ್ಚ 1,768 ಕೋಟಿ ರೂ.ಗೆ ಹೋಲಿಸಿದರೆ ಈ ವರ್ಷದಲ್ಲಿನ ಒಟ್ಟು ವೆಚ್ಚವು 2,612 ಕೋಟಿ ರೂ.ಗೆ ಏರಿದೆ.
ಕಂಪನಿ ವಹಿವಾಟಿನ ಬಗ್ಗೆ ಶೇರುದಾರರಿಗೆ ಪತ್ರ ಬರೆದಿರುವ ಜೊಮಾಟೊ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ದೀಪಿಂದರ್ ಗೋಯಲ್, ಕಂಪನಿಯು ತನ್ನ ವ್ಯವಹಾರದ ಸಂಕೀರ್ಣತೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ತನ್ನ ವ್ಯವಹಾರಗಳಲ್ಲಿ ಸರಿಯಾದ ಜನರನ್ನು ಸೂಕ್ತ ಸ್ಥಳಗಳಿಗೆ ನಿಯೋಜನೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಮುಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಇಡೀ ವ್ಯವಹಾರವು ಲಾಭದಾಯಕತೆಯ ತ್ತ ಹೊರಳುವ ವಿಶ್ವಾಸವಿದೆ ಎಂದು ಅವರು ಮೇ ತಿಂಗಳಲ್ಲಿ ಹೇಳಿದ್ದರು.
ಜೊಮಾಟೊದ ಫುಡ್ ಡೆಲಿವರಿ ವಿಭಾಗದ ಒಟ್ಟು ಆರ್ಡರ್ ಮೌಲ್ಯ (ಜಿಒವಿ) ಶೇಕಡಾ 11.4 ರಷ್ಟು ಏರಿಕೆಯಾಗಿ 7,318 ಕೋಟಿ ರೂ.ಗೆ ತಲುಪಿದೆ. ಸರಾಸರಿ ಮಾಸಿಕ ಬಳಕೆದಾರರ ಸಂಖ್ಯೆ ಶೇಕಡಾ 5.4 ರಷ್ಟು ಏರಿಕೆಯಾಗಿ 17.5 ಮಿಲಿಯನ್ಗೆ ತಲುಪಿದೆ.
ಬರುವ ದಿನಗಳಲ್ಲಿ ಜೊಮ್ಯಾಟೊ ಶೇರು ಬೆಲೆ ಗರಿಷ್ಠ 110 ರೂಪಾಯಿಗೆ ಏರಿಕೆಯಾಗಬಹುದು ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್ ನಿರೀಕ್ಷಿಸಿದೆ. ಇದು ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ 28 ಪ್ರತಿಶತದಷ್ಟು ಹೆಚ್ಚಾಗಿದೆ. ಮುಂದಿನ 12 ತಿಂಗಳಲ್ಲಿ ಶೇರು ಮೌಲ್ಯ ಶೇ 37 ರಷ್ಟು ಏರಿಕೆಯಾಗಿ ಪ್ರತಿ ಶೇರಿಗೆ 115 ರೂ.ಗೆ ಏರುವ ನಿರೀಕ್ಷೆಯಿದೆ ಎಂದು ಜೆಎಂ ಫೈನಾನ್ಷಿಯಲ್ ಅಂದಾಜು ಮಾಡಿದೆ. ಮೋರ್ಗನ್ ಸ್ಟಾನ್ಲಿ ಪ್ರಕಾರ ಜೊಮ್ಯಾಟೊ ಶೇರು ಬೆಲೆ 85 ರೂ.ಗಳಿಂದ 115 ರೂ.ಗೆ ಹೆಚ್ಚಾಗುವ ನಿರೀಕ್ಷೆ ವ್ಯಕ್ತಪಡಿಸಿದೆ.
ಇದನ್ನೂ ಓದಿ : Zomato ಆದಾಯ 2,416 ಕೋಟಿ; ಲಾಭ 2 ಕೋಟಿ ರೂ.