ಮುಂಬೈ : ಭಾರತೀಯ ಶೇರು ಸೂಚ್ಯಂಕಗಳು ಶುಕ್ರವಾರ ಸತತ ಎರಡನೇ ದಿನಕ್ಕೆ ಕುಸಿತವನ್ನು ಮುಂದುವರಿಸಿವೆ. ಫಾರ್ಮಾ, ಹೆಲ್ತ್ ಕೇರ್, ಬ್ಯಾಂಕ್, ಹಣಕಾಸು, ಗ್ರಾಹಕ ಸರಕುಗಳು, ಲೋಹ ಮತ್ತು ಆಟೋಮೊಬೈಲ್ ಶೇರುಗಳು ದೇಶೀಯ ಸೂಚ್ಯಂಕಗಳನ್ನು ಕೆಳಮಟ್ಟಕ್ಕೆ ಇಳಿಸಿದವು.
30 ಶೇರುಗಳ ಬಿಎಸ್ಇ ಸೆನ್ಸೆಕ್ಸ್ 366 ಪಾಯಿಂಟ್ಸ್ ಅಥವಾ ಶೇಕಡಾ 0.56 ರಷ್ಟು ಕುಸಿದು 65,323 ಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ ಸೂಚ್ಯಂಕ 115 ಪಾಯಿಂಟ್ಸ್ ಅಥವಾ ಶೇಕಡಾ 0.59 ರಷ್ಟು ಕುಸಿದು 19,428 ಕ್ಕೆ ತಲುಪಿದೆ. ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಶೇರುಗಳು ಕೂಡ ಇಳಿಕೆಯಲ್ಲಿ ಕೊನೆಗೊಂಡವು. ನಿಫ್ಟಿ ಮಿಡ್ ಕ್ಯಾಪ್ 100 ಶೇಕಡಾ 0.45 ರಷ್ಟು ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಶೇಕಡಾ 0.18 ರಷ್ಟು ಕುಸಿದಿದೆ. ಫಿಯರ್ ಗೇಜ್ ಇಂಡಿಯಾ ವಿಐಎಕ್ಸ್ ಶೇರು ಶೇಕಡಾ 1.07 ರಷ್ಟು ಏರಿಕೆಯಾಗಿ 11.52 ಕ್ಕೆ ತಲುಪಿದೆ. ಏಷ್ಯಾದ ಹೆಚ್ಚಿನ ಶೇರು ಮಾರುಕಟ್ಟೆಗಳು ಇಂದು ಕೆಳಮಟ್ಟದಲ್ಲಿಯೇ ವಹಿವಾಟು ನಡೆಸಿದವು.
ಚಿಲ್ಲರೆ ಹಣದುಬ್ಬರ ಮುನ್ಸೂಚನೆ ಮತ್ತು ನಗದು ಹರಿವು ನಿಯಂತ್ರಣ ಕ್ರಮಗಳನ್ನು ಹೆಚ್ಚಿಸುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧಾರದಿಂದ ಹೂಡಿಕೆದಾರರು ಜಾಗ್ರತೆಯಿಂದ ವಹಿವಾಟು ನಡೆಸುತ್ತಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಣದುಬ್ಬರವು ಶೇಕಡಾ 6.20ಕ್ಕೆ ಏರಿಕೆಯಾಗಬಹುದು ಎಂದು ಆರ್ಬಿಐ ಅಂದಾಜಿಸಿದೆ.
ಇದು ಹಿಂದಿನ ಮುನ್ಸೂಚನೆಯಾದ ಶೇಕಡಾ 5.20 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಹೆಚ್ಚುವರಿ ನಗದು ಹರಿವನ್ನು ಸಂಗ್ರಹಿಸಲು ನಗದು ಮೀಸಲು ಅನುಪಾತ (ಸಿಆರ್ಆರ್) ಅಡಿಯಲ್ಲಿ ಹೆಚ್ಚಿದ ಠೇವಣಿಗಳ ಹೆಚ್ಚಿನ ಭಾಗವನ್ನು ಮೀಸಲಿಡುವಂತೆ ಕೇಂದ್ರ ಬ್ಯಾಂಕ್ ಬ್ಯಾಂಕ್ಗಳಿಗೆ ಸೂಚಿಸಿದೆ. ಆದಾಗ್ಯೂ ಆರ್ಬಿಐ ತನ್ನ ಇದು ರೆಪೊ ದರವನ್ನು ಶೇಕಡಾ 6.50 ಕ್ಕೆ ಸ್ಥಿರವಾಗಿ ಉಳಿಸಿಕೊಂಡಿದೆ.