ಸಿಂಗಾಪುರ :ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ಟಪ್ ಫಂಡಿಂಗ್ ಕಡಿಮೆಯಾಗುತ್ತಿದೆ. ಕ್ರಂಚ್‌ಬೇಸ್‌ನ ಮಾಹಿತಿಯ ಪ್ರಕಾರ, ಒಟ್ಟು ಜಾಗತಿಕ ವೆಂಚರ್ ಫಂಡಿಂಗ್ 2021 ರ ಕೊನೆಯ ತ್ರೈಮಾಸಿಕದಲ್ಲಿ ಇದ್ದ ಸುಮಾರು 187 ಶತಕೋಟಿ ಯುಎಸ್ ಡಾಲರ್ನ ಗರಿಷ್ಠ ಮಟ್ಟದಿಂದ 2022 ರ ಪ್ರಥಮ ತ್ರೈಮಾಸಿಕದಲ್ಲಿ ಕುಸಿಯಲು ಪ್ರಾರಂಭಿಸಿತು. ಇನ್ನೊಂದು ರೀತಿ ಹೇಳಬೇಕೆಂದರೆ 2021 ವಿವಿಧ ಕಾರಣಗಳಿಗಾಗಿ ವಿಶಿಷ್ಟ ವರ್ಷವಾಗಿತ್ತು ಮತ್ತು ಅದು ಮತ್ತೊಮ್ಮೆ ಪುನರಾವರ್ತನೆಯಾಗುವ ಸಾಧ್ಯತೆಯಿಲ್ಲ.
ವಾಸ್ತವವಾಗಿ ಆರ್ಥಿಕ ಹಿಂಜರಿತ 2022 ರ ದ್ವಿತೀಯಾರ್ಧದಲ್ಲಿ ಮಾತ್ರ ಗಮನಾರ್ಹವಾಗಿತ್ತು. 2022 ರ ಮೊದಲ ಎರಡು ತ್ರೈಮಾಸಿಕಗಳಲ್ಲಿ ಸಂಗ್ರಹಿಸಲಾದ ಮೊತ್ತವು ಪ್ರತಿ ತ್ರೈಮಾಸಿಕದಲ್ಲಿ 2020 ರ ಕೊನೆಯ ತ್ರೈಮಾಸಿಕದಲ್ಲಿ ಸಂಗ್ರಹಿಸಲಾದ 100 ಶತಕೋಟಿ ಡಾಲರ್ಗಿಂತ ಹೆಚ್ಚಾಗಿದೆ. ಕೋವಿಡ್-19 ಸಾಂಕ್ರಾಮಿಕವು ಅನೇಕ ಕೈಗಾರಿಕೆಗಳು ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮವನ್ನುಂಟು ಮಾಡಿರುವ ಹೊರತಾಗಿಯೂ, ತಂತ್ರಜ್ಞಾನ ವಲಯವು ಆ ಪರಿಸ್ಥಿತಿಯಲ್ಲಿ ವಿವಿಧ ರೀತಿಯ ಲಾಭ ಪಡೆದುಕೊಂಡಿತು. ಕೋವಿಡ್-19 ಸಮಯಾವಧಿಯು ಜನರು ವಾಸಿಸುವ ಮತ್ತು ಕೆಲಸ ಮಾಡುವ ರೀತಿಯಲ್ಲಿ ಮೂಲಭೂತ ಬದಲಾವಣೆಗಳಿಗೆ ಕಾರಣವಾಯಿತು.
"ಇದು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಪ್ರೊಫೆಸರ್ ಟಾಮ್ ಐಸೆನ್‌ಮನ್ ಹೇಳಿದ್ದಾರೆ. ಇವರು ವೈ ಸ್ಟಾರ್ಟ್‌ಅಪ್ಸ್ ಫೇಲ್ ಪುಸ್ತಕದ ಲೇಖಕರೂ ಆಗಿದ್ದಾರೆ. ಕೋವಿಡ್ ಬಿಕ್ಕಟ್ಟು ಅನೇಕ ಪ್ರತಿಭಾವಂತ, ಸೃಜನಶೀಲ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲು ಕಾರಣವಾಯಿತು. ಹೀಗಾಗಿ ಅವರಿಗೆ ಬಿಡುವಿನ ಸಮಯ ಹೆಚ್ಚಾಯಿತು. ಆ ಸಮಯವನ್ನು ಅವರು ಸ್ಟಾರ್ಟಪ್ ಐಡಿಯಾಗಳನ್ನು ಸೃಷ್ಟಿಸಲು ಕಳೆಯುತ್ತಾರೆ" ಎಂಬುದನ್ನು ಅವರು ಗಮನಿಸಿದರು.
ಕೋವಿಡ್ ಅವಧಿಯಲ್ಲಿ ವೇಗ ಪಡೆದುಕೊಂಡಿದ್ದ ಸೇವೆ:ಕೋವಿಡ್-19 ಅವಧಿಯು ಡಿಜಿಟಲ್ ರೂಪಾಂತರ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಯನ್ನು ವೇಗಗೊಳಿಸಿತು. ಇದು ಹೊಸ ಬಗೆಯ ಉತ್ಪನ್ನಗಳು ಮತ್ತು ಸೇವೆಗಳಿಗೆ ಹಠಾತ್ ಬೇಡಿಕೆಯನ್ನು ಸೃಷ್ಟಿಸುವ ಕಾರಣದಿಂದ ಅದರ ಪ್ರಯೋಜನಗಳನ್ನು ಪಡೆಯಲು ಅನೇಕ ಸ್ಟಾರ್ಟ್‌ಅಪ್‌ಗಳು ಆರಂಭವಾದವು.
ಇದರ ಜೊತೆಗೆ ಪ್ರಪಂಚದಾದ್ಯಂತದ ಕೈಗಾರಿಕೆಗಳು ಮತ್ತು ಹೂಡಿಕೆದಾರರು ಕೇಂದ್ರೀಯ ಬ್ಯಾಂಕುಗಳಿಂದ ಸಡಿಲವಾದ ಹಣಕಾಸು ನೀತಿಯಿಂದ ಮತ್ತು ವಿವಿಧ ಸರ್ಕಾರಿ-ನೇತೃತ್ವದ ಕೋವಿಡ್-19 ಸಹಾಯ ಪ್ಯಾಕೇಜ್‌ಗಳ ಲಾಭ ಪಡೆದರು. ಇದರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತಾಯಿತು ಮತ್ತು ಸ್ಟಾರ್ಟಪ್ ಆರಂಭಿಸಲು ಧೈರ್ಯ ಹೆಚ್ಚಾಯಿತು. ಟೆಕ್ ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ಮೌಲ್ಯಯುತವಾದವು ಮತ್ತು ತಮ್ಮ ಹೂಡಿಕೆದಾರರಿಗೆ ಭಾರಿ ಲಾಭವನ್ನು ತಂದುಕೊಟ್ಟವು.
2022ರ ದ್ವಿತೀಯಾರ್ಧದಲ್ಲಿ ಏರಿದ ಬಡ್ಡಿ:ಆದಾಗ್ಯೂ 2022 ರ ದ್ವಿತೀಯಾರ್ಧದಲ್ಲಿ ಮತ್ತು 2023 ರಲ್ಲಿ ಬಡ್ಡಿದರಗಳು ಏರಿದವು. ಸ್ಟಾಕ್ ಮಾರುಕಟ್ಟೆಗಳ ಮೌಲ್ಯ ಮತ್ತು ಕ್ರಿಪ್ಟೋ ಮಾರುಕಟ್ಟೆಗಳು ಕುಸಿದವು. ಆರ್ಥಿಕ ಹಿಂಜರಿತದ ಪರಿಣಾಮವಾಗಿ ಟೆಕ್ ಕಂಪನಿಗಳು ಸಿಬ್ಬಂದಿಯನ್ನು ವಜಾಗೊಳಿಸಿದವು. ಇವೆಲ್ಲವೂ ವೆಂಚರ್ ಕ್ಯಾಪಿಟಲಿಸ್ಟ್‌ಗಳು ತಮ್ಮ ಹೂಡಿಕೆಯನ್ನು ನಿಧಾನವಾಗಿಸಲು ಕಾರಣವಾಯಿತು.
2022 ರಲ್ಲಿ ಒಟ್ಟು ಜಾಗತಿಕ ವೆಂಚರ್ ಕ್ಯಾಪಿಟಲ್ ನಿಧಿ 445 ಶತಕೋಟಿ ಡಾಲರ್ ಆಗಿತ್ತು. ಇದು 2021 ರಲ್ಲಿ ಪಡೆದ 681 ಶತಕೋಟಿ ಡಾಲರ್ ಸ್ಟಾರ್ಟ್‌ಅಪ್‌ಗೆ ಹೋಲಿಸಿದರೆ 35 ಪ್ರತಿಶತದಷ್ಟು ಕುಸಿದಿದೆ. 2022 ರಲ್ಲಿ ಕಂಡುಬಂದ ಇಳಿಮುಖ ಪ್ರವೃತ್ತಿಯು 2023 ರವರೆಗೂ ಮುಂದುವರೆಯಿತು. ಆಗ್ನೇಯ ಏಷ್ಯಾದಲ್ಲಿ ಸ್ಟಾರ್ಟ್‌ಅಪ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ Tracxn ಅನ್ನು ಆಧರಿಸಿ, 2023 ರ ಮೊದಲ ತ್ರೈಮಾಸಿಕದಲ್ಲಿ ಒಟ್ಟು 1.1 ಶತಕೋಟಿ ಡಾಲರ್ ಆ ಪ್ರದೇಶದ ಸ್ಟಾರ್ಟ್‌ಅಪ್‌ಗಳಿಗೆ ಸಂದಾಯವಾಗಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ 69 ಪ್ರತಿಶತ ಕಡಿಮೆಯಾಗಿದೆ ಮತ್ತು 2022ರ 4ನೇ ತ್ರೈಮಾಸಿಕಕ್ಕೆ ಗೆ ಹೋಲಿಸಿದರೆ 42 ಶೇಕಡಾ ಕಡಿಮೆಯಾಗಿದೆ.
ಕಡಿಮೆಯಾದ ಹೂಡಿಕೆ:ವಿವಿಧ ವಲಯಗಳಲ್ಲಿ ಸೀಡ್ ಫಂಡಿಂಗ್ ಹೂಡಿಕೆಗಳು ವರ್ಷದಿಂದ ವರ್ಷಕ್ಕೆ 27 ಶೇಕಡಾ ಮತ್ತು ತಿಂಗಳಿಗೆ 73 ಶೇಕಡಾ ಕಡಿಮೆಯಾಗಿದೆ. ಆದಾಗ್ಯೂ, ಕೊನೆಯ ಹಂತದ ಹೂಡಿಕೆಗಳಿಗೆ ಸರಾಸರಿ ಒಪ್ಪಂದದ ಗಾತ್ರವು ಹೆಚ್ಚಿರುವುದು ಆಸಕ್ತಿದಾಯಕವಾಗಿದೆ. 2023ರ ಪ್ರಥಮ ತ್ರೈಮಾಸಿಕದಲ್ಲಿ ಇದು ಕಳೆದ ವರ್ಷದ ಇದೇ ತ್ರೈಮಾಸಿಕದ 61 ಮಿಲಿಯನ್ ಡಾಲರ್ಗೆ ಹೋಲಿಸಿದರೆ 83 ಮಿಲಿಯನ್ ಡಾಲರ್ ಮತ್ತು 2022 ರ 4ನೇ ತ್ರೈಮಾಸಿಕದ 68 ಮಿಲಿಯನ್ ಡಾಲರ್ಗೆ ಆಗಿದೆ.
ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಹಣವನ್ನು ಪಡೆದ ವಿಭಾಗಗಳೆಂದರೆ ಫಿನ್‌ಟೆಕ್, ವಿಮಾ ತಂತ್ರಜ್ಞಾನ ಮತ್ತು ಆಟೋ ಟೆಕ್. ಸಿಂಗಾಪುರವು 2023 ರ ಪ್ರತಂ ತ್ರೈಮಾಸಿಕದಲ್ಲಿ ಸ್ಟಾರ್ಟಪ್ ನಿಧಿಯಲ್ಲಿ 516 ಮಿಲಿಯನ್ ಡಾಲರ್ ಅನ್ನು ಆಕರ್ಷಿಸಿತು. ಇದು ಈ ಪ್ರದೇಶದಲ್ಲಿ ಅತ್ಯಧಿಕವಾಗಿದೆ.
ಒಟ್ಟಾರೆಯಾಗಿ, ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳು 2021 ರಲ್ಲಿ ದಾಖಲೆಯ 30 ಶತಕೋಟಿ ಡಾಲರ್ ಹಣವನ್ನು ಮತ್ತು 2022 ರಲ್ಲಿ ಮತ್ತೊಂದು ಸುತ್ತಿನಲ್ಲಿ 20 ಶತಕೋಟಿ ಡಾಲರ್ ಹಣವನ್ನು ಆಕರ್ಷಿಸಿದವು. ಸ್ಟಾರ್ಟ್‌ಅಪ್‌ಗಳು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೇವಲ 2 ಶತಕೋಟಿ ಡಾಲರ್ ಸಂಗ್ರಹಿಸಿವೆ. ಇದು 2022 ರ ಅದೇ ಅವಧಿಗಿಂತ 75 ಪ್ರತಿಶತ ಕಡಿಮೆಯಾಗಿದೆ. ಸ್ಟಾರ್ಟಪ್ಗಳು ಈ ವರ್ಷ 10 ಶತಕೋಟಿ ಡಾಲರ್ಗಿಂತ ಕಡಿಮೆ ಸಂಗ್ರಹಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದ್ದ 561 ಕ್ಕೆ ಹೋಲಿಸಿದರೆ 2023ರ ಪ್ರಥಮ ತ್ರೈಮಾಸಿಕದಲ್ಲಿ ಕೇವಲ 217 ಭಾರತೀಯ ಸ್ಟಾರ್ಟ್‌ಅಪ್‌ಗಳು ಮಾತ್ರ ಫಂಡಿಂಗ್ ಸಂಗ್ರಹಿಸಿವೆ.
ಇದನ್ನೂ ಓದಿ : ಜೂ.6 ರಿಂದ 8ರವರೆಗೆ ಆರ್ಬಿಐ ಎಂಪಿಸಿ ಸಭೆ: ರೆಪೊ ದರ ಯಥಾಸ್ಥಿತಿ ನಿರೀಕ್ಷೆ