ನವದೆಹಲಿ : ಭಾರತದಲ್ಲಿ ಭರವಸೆಯ ಸ್ಟಾರ್ಟ್‌ಅಪ್‌ಗಳನ್ನು ಸಶಕ್ತಗೊಳಿಸುವ ನಿಟ್ಟಿನಲ್ಲಿ ಅಮೆಜಾನ್ ಈ ವಾರದಿಂದ ತನ್ನ ಪ್ರೈಮ್ ಸ್ಟ್ರೀಮಿಂಗ್ ಸೇವೆಯಲ್ಲಿ ಶಾರ್ಕ್ ಟ್ಯಾಂಕ್ ಮಾದರಿಯ ಟಿವಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಮುಂಬರುವ ವಾರಾಂತ್ಯದಲ್ಲಿ ಇ -ಕಾಮರ್ಸ್ ದೈತ್ಯ ಅಮೆಜಾನ್ ತನ್ನ ಪ್ರೈಮ್ ಡೇಗೆ ಸಜ್ಜಾಗುತ್ತಿದ್ದಂತೆ, ಪ್ರೈಮ್ ವಿಡಿಯೋ ಶೋವನ್ನು ಬುಧವಾರದಿಂದಲೇ ಅನಾವರಣಗೊಳಿಸಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ವರದಿಯ ಪ್ರಕಾರ, ಪ್ರೈಮ್ ಸ್ಟಾರ್ಟ್ಅಪ್ ಸರಣಿಯು ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿನ ಸ್ಟಾರ್ಟಪ್ಗಳ ಮಾದರಿಗಳನ್ನು ಪ್ರದರ್ಶಿಸಲಿದೆ. "ಅಮೆಜಾನ್ ತನ್ನ ಭಾರತ ಕೇಂದ್ರಿತ 250 ಮಿಲಿಯನ್ ಡಾಲರ್ ಎಸ್ಎಂ ಭಾವ್ (SMBhav) ನಿಧಿಯ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಫಂಡಿಂಗ್ ಮಾಡಲಿದೆ" ಎಂದು ವರದಿ ಉಲ್ಲೇಖಿಸಿದೆ. ಆದಾಗ್ಯೂ ಅಮೆಜಾನ್ ಇಂಡಿಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆಜಾನ್ ಇಂಡಿಯಾ ಪ್ರತಿನಿಧಿಗಳು ಹಲವಾರು ಏಂಜೆಲ್ ಹೂಡಿಕೆದಾರರು ಮತ್ತು ವೆಂಚರ್ ಫಂಡ್‌ಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಸಹ ಪ್ರೈಮ್ ವಿಡಿಯೋ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ವರದಿಯಾಗಿದೆ. ಅಮೆಜಾನ್ ಪ್ರೈಮ್ ಸ್ಟಾರ್ಟಪ್ ಸರಣಿಯು ಶಾರ್ಕ್ ಟ್ಯಾಂಕ್ ಇಂಡಿಯಾ ಮಾದರಿಯಲ್ಲೇ ಇರಲಿದೆ.
ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಈಗಾಗಲೇ ಶಾರ್ಕ್ ಟ್ಯಾಂಕ್ ಇಂಡಿಯಾದ ಎರಡು ಸೀಸನ್‌ಗಳು ಪ್ರಸಾರವಾಗಿವೆ. ಸೋನಿ ಇಂಡಿಯಾದಲ್ಲಿನ ಶಾರ್ಕ್ ಟ್ಯಾಂಕ್ ಶೋ ಅಮೇರಿಕನ್ ಶಾರ್ಕ್ ಟ್ಯಾಂಕ್‌ನ ಶೋ ದ ಭಾರತೀಯ ಫ್ರ್ಯಾಂಚೈಸ್ ಆಗಿದೆ. ಉದ್ಯಮಿಗಳು ಸ್ಟಾರ್ಟಪ್ ಕಂಪನಿಯೊಂದರಲ್ಲಿ ಹೂಡಿಕೆ ಮಾಡಬಹುದಾ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ನಿಟ್ಟಿನಲ್ಲಿ ಹೂಡಿಕೆದಾರರಿಗೆ ಅಗತ್ಯವಾದ ಪ್ರಸೆಂಟೇಶನ್ಗಳನ್ನು ತೋರಿಸುತ್ತದೆ.