ನವದೆಹಲಿ:ಅದಾನಿ-ಹಿಂಡನ್‌ಬರ್ಗ್ ಪ್ರಕರಣದಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಾರುಕಟ್ಟೆ ನಿಯಂತ್ರಕವಾದ ಸೆಬಿ ಕೇಸ್ನ ಪ್ರಮುಖ ಅಂಶಗಳನ್ನು ಬಚ್ಚಿಟ್ಟಿದೆ. ಆದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ತನಿಖೆಯ ಸಾರಾಂಶವನ್ನು ಕೋರ್ಟ್ ಗಮನಕ್ಕೆ ತಂದಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಅದರಲ್ಲಿ ಈ ಆರೋಪ ಮಾಡಲಾಗಿದೆ. ಅದಾನಿ ಸಮೂಹ ದುಬೈ ಮತ್ತು ಮಾರಿಷಸ್ ಮೂಲದ ಘಟಕಗಳ ಮೂಲಕ ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಜನವರಿ 2014 ರ ಡಿಆರ್‌ಐ ಎಚ್ಚರಿಕೆಯನ್ನು ಸೆಬಿ ಮರೆಮಾಚಿದೆ ಎಂದು ದೂರಲಾಗಿದೆ. 2014 ರಲ್ಲಿ ಯುಎಇ ಮೂಲದ ಅಂಗಸಂಸ್ಥೆಯಿಂದ ಅದಾನಿ ಗ್ರೂಪ್‌ನ ಸಂಸ್ಥೆಗಳು ಉಪಕರಣ ಮತ್ತು ಯಂತ್ರೋಪಕರಣಗಳ ಆಮದಿನಲ್ಲಿ ನಡೆಸಿದ ಅವ್ಯವಹಾರ ಪ್ರಕರಣವನ್ನು ಡಿಆರ್‌ಐ ತನಿಖೆ ನಡೆಸುತ್ತಿದೆ. ಈ ಸಂಬಂಧ ಡಿಆರ್‌ಐ ಮೇ 15, 2014 ರಂದು ಶೋಕಾಸ್ ನೋಟಿಸ್ ಸಹ ನೀಡಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಸೆಬಿ ಈ ಮಹತ್ವದ ಮಾಹಿತಿಯನ್ನು ನ್ಯಾಯಾಲಯದಿಂದ ಮರೆಮಾಚಿರುವುದು ಮತ್ತು ಡಿಆರ್‌ಐ ನೀಡಿದ ನೋಟಿಸ್ ಬಗ್ಗೆಯೂ ಯಾವುದೇ ತನಿಖೆ ನಡೆಸದಿರುವುದು ಆಘಾತಕಾರಿಯಾಗಿದೆ ಎಂದು ಪಿಐಎಲ್ ಹೇಳಿದೆ. ಅದಾನಿ ಗ್ರೂಪ್ನಿಂದ 2,323 ಕೋಟಿ ರೂ.ಗಳ ವಂಚನೆ ಆರೋಪ ಇರುವ ಸಿಡಿ ಮತ್ತು ಡಿಆರ್‌ಐ ತನಿಖೆ ನಡೆಸುತ್ತಿರುವ ಪ್ರಕರಣದ ಕುರಿತು ಎರಡು ಟಿಪ್ಪಣಿಗಳನ್ನು ಒಳಗೊಂಡಿದೆ. ಡಿಆರ್‌ಐನ ಮುಂಬೈ ವಲಯ ಘಟಕದಿಂದ ಹೆಚ್ಚಿನ ದಾಖಲೆಗಳನ್ನು ಪಡೆಯಬಹುದು ಎಂದು ಅದು ಹೇಳಿದೆ.