ಮುಂಬೈ: ಶುಕ್ರವಾರ ನಡೆಯಲಿರುವ ಆರ್ಬಿಐ ಸಭೆಯ ನಿರ್ಧಾರದ ಮೇಲೆ ಕಣ್ಣಿಟ್ಟಿರುವ ಷೇರು ಮಾರುಕಟ್ಟೆ ಸತತ ಏಳು ದಿನಗಳ ಏರಿಕೆಯ ನಂತರ ಇಂದು (ಗುರುವಾರ) ಇಳಿಕೆಯೊಂದಿಗೆ ವಹಿವಾಟು ಮುಗಿಸಿದವು. ಏಷ್ಯಾದ ಮಾರುಕಟ್ಟೆಗಳಲ್ಲಿನ ಇಳಿಕೆಯ ಪ್ರವೃತ್ತಿ ಕೂಡ ಭಾರತದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.
ಗುರುವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 69,695 ಗರಿಷ್ಠ ಮತ್ತು 69,321 ಕನಿಷ್ಠ ಮಟ್ಟವನ್ನು ತಲುಪಿ 132 ಪಾಯಿಂಟ್ಗಳ ಸಾಧಾರಣ ನಷ್ಟದೊಂದಿಗೆ 69,522ರಲ್ಲಿ ಸ್ಥಿರವಾಯಿತು. ಎನ್ಎಸ್ಇ ನಿಫ್ಟಿ-5037 ಪಾಯಿಂಟ್ಸ್ ಕುಸಿದು 20,901ಕ್ಕೆ ತಲುಪಿದೆ. ಕಳೆದ ಏಳು ವಹಿವಾಟು ಅವಧಿಗಳಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಶೇಕಡಾ 6ರಷ್ಟು ಏರಿಕೆಯಾಗಿದ್ದವು.
ಆದಾಗ್ಯೂ ವಿಶಾಲ ಸೂಚ್ಯಂಕಗಳು ಗುರುವಾರ ಲಾಭದೊಂದಿಗೆ ಕೊನೆಗೊಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇಕಡಾ 0.7ರಷ್ಟು ಏರಿಕೆ ಕಂಡರೆ, ಸ್ಮಾಲ್ ಕ್ಯಾಪ್ ಶೇಕಡಾ 0.3ರಷ್ಟು ಏರಿಕೆಯಾಗಿದೆ. ವಲಯವಾರು ನೋಡಿದರೆ ವಿದ್ಯುತ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದರೆ, ಸಕ್ಕರೆ ವಲಯದ ಷೇರುಗಳು ಇಂದು ಅತ್ಯಧಿಕ ಮಾರಾಟವಾದವು. ಪೋಸ್ಟ್ಪೇಡ್ ಸಾಲಗಳ ಪ್ರಮಾಣ ಕಡಿಮೆ ಮಾಡುವ ನಿರ್ಧಾರದಿಂದ ಆದಾಯ ನಷ್ಟ ಉಂಟಾಗುವ ನಿರೀಕ್ಷೆಯಿಂದ ಪೇಟಿಎಂ ಷೇರು ಇಂದು ಶೇಕಡಾ 19ರಷ್ಟು ಕುಸಿಯಿತು.