ಕರ್ನಾಟಕ

karnataka

ETV Bharat / business

ಷೇರು ಮಾರುಕಟ್ಟೆ: ಸೆನ್ಸೆಕ್ಸ್​ 490 ಪಾಯಿಂಟ್​ ಏರಿಕೆ; 19,100 ದಾಟಿದ ನಿಫ್ಟಿ - ಬಿಎಸ್ಇಯಲ್ಲಿ ಗುರುವಾರ ವಹಿವಾಟು

ಗುರುವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಕೊನೆಗೊಂಡಿವೆ.

Sensex gains 490 pts Nifty closes above 19,100
Sensex gains 490 pts Nifty closes above 19,100

By ETV Bharat Karnataka Team

Published : Nov 2, 2023, 7:25 PM IST

ಬೆಂಗಳೂರು : ಸತತ ಎರಡು ದಿನಗಳ ಕಾಲ ಇಳಿಕೆಗೆ ಸಾಕ್ಷಿಯಾದ ನಂತರ, ಅಮೆರಿಕದ ಕೇಂದ್ರ ಬ್ಯಾಂಕ್​( ಫೆಡರಲ್ ರಿಸರ್ವ್​)ನ ನಿಲುವು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದ್ದರಿಂದ ಭಾರತೀಯ ಈಕ್ವಿಟಿ ಮಾರುಕಟ್ಟೆಗಳು ಗುರುವಾರ ತೀವ್ರ ಚೇತರಿಕೆ ಕಂಡಿವೆ. ಗುರುವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 489.57 ಪಾಯಿಂಟ್ಸ್ ಅಥವಾ ಶೇಕಡಾ 0.77 ರಷ್ಟು ಏರಿಕೆ ಕಂಡು 64,080.90 ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 144.10 ಪಾಯಿಂಟ್ಸ್ ಅಥವಾ ಶೇಕಡಾ 0.76 ರಷ್ಟು ಏರಿಕೆ ಕಂಡು 19,133.25 ರಲ್ಲಿ ಕೊನೆಗೊಂಡಿದೆ.

ನಿಫ್ಟಿಗೆ 19,150 ಮತ್ತು 19,050 ಮಟ್ಟಗಳು ನಿರ್ಣಾಯಕ ಬೆಂಬಲ ನೀಡಿದವು. ಸೂಚ್ಯಂಕವು ಇಂಟ್ರಾಡೇ ಗರಿಷ್ಠ 19,175.25 ಮತ್ತು ಕನಿಷ್ಠ 19,064.15 ಕ್ಕೆ ತಲುಪಿತ್ತು. ಮುಂಬೈ ಷೇರು ಮಾರುಕಟ್ಟೆ ಬಿಎಸ್​ಸಿಯಲ್ಲಿ ಗುರುವಾರ ವಹಿವಾಟು ನಡೆಸಿದ 3,791 ಷೇರುಗಳಲ್ಲಿ 2,322 ಷೇರುಗಳು ಏರಿಕೆ ಕಂಡರೆ, 1,328 ಷೇರುಗಳು ಕುಸಿದವು ಮತ್ತು 141 ಷೇರುಗಳು ಬದಲಾಗದೇ ಉಳಿದವು.

ನಿಫ್ಟಿ 50 ಷೇರುಗಳಲ್ಲಿ ಬ್ರಿಟಾನಿಯಾ (ಶೇ 2.97), ಹಿಂಡಾಲ್ಕೊ (ಶೇ 2.68), ಇಂಡಸ್ಇಂಡ್ ಬ್ಯಾಂಕ್ (ಶೇ 2.10), ಅಪೊಲೊ ಆಸ್ಪತ್ರೆ (ಶೇ 1.95) ಮತ್ತು ಐಷರ್ ಮೋಟಾರ್ಸ್ (ಶೇ 1.76) ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಬಜಾಜ್ ಆಟೋ (ಶೇ -0.47); ಎಚ್​ಡಿಎಫ್​ಸಿ ಲೈಫ್ (ಶೇ 0.17), ಒಎನ್​ಜಿಸಿ (-ಶೇ 0.19) ಮತ್ತು ಅದಾನಿ ಎಂಟರ್ಪ್ರೈಸಸ್ (ಶೇ 0.15) ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ.

ಹಿಂದಿನ ದಿನ ಅಂದರೆ ಬುಧವಾರದಂದು ಸೆನ್ಸೆಕ್ಸ್ 283.60 ಪಾಯಿಂಟ್ ಅಥವಾ ಶೇಕಡಾ 0.44 ರಷ್ಟು ಕುಸಿದು 63,591.33 ಕ್ಕೆ ಕೊನೆಗೊಂಡಿತ್ತು. ಹಾಗೆಯೇ ನಿಫ್ಟಿ 90.45 ಪಾಯಿಂಟ್ ಅಥವಾ ಶೇಕಡಾ 0.47 ರಷ್ಟು ಕುಸಿದು 18,989.15 ಕ್ಕೆ ತಲುಪಿತ್ತು.

ಯುಎಸ್ ಫೆಡರಲ್ ರಿಸರ್ವ್ ಬೆಂಚ್ ಮಾರ್ಕ್ ಬಡ್ಡಿದರ ಹೆಚ್ಚಳವನ್ನು ತಡೆಹಿಡಿದ ನಂತರ ಕಚ್ಚಾ ತೈಲ ಬೆಲೆಗಳು ಗುರುವಾರ ಶೇ 1ರಷ್ಟು ಏರಿಕೆಯಾಗಿದೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬ್ಯಾರೆಲ್​ಗೆ 91 ಸೆಂಟ್ಸ್ ಅಥವಾ ಶೇ 1.08 ರಷ್ಟು ಏರಿಕೆಯಾಗಿ 85.54 ಡಾಲರ್​ಗೆ ತಲುಪಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ಕ್ರೂಡ್ ಫ್ಯೂಚರ್ಸ್​ 83 ಸೆಂಟ್ಸ್ ಅಥವಾ ಶೇ 1.03 ರಷ್ಟು ಏರಿಕೆಯಾಗಿ ಬ್ಯಾರೆಲ್​ಗೆ 81.27 ಡಾಲರ್​ಗೆ ತಲುಪಿದೆ. ಬುಧವಾರ ನಡೆದ ಇತ್ತೀಚಿನ ಸಭೆಯಲ್ಲಿ ಫೆಡ್ ತನ್ನ ಬೆಂಚ್ ಮಾರ್ಕ್ ಬಡ್ಡಿದರವನ್ನು 5.25% ರಿಂದ 5.50% ನಲ್ಲಿ ಬದಲಾಯಿಸದೆ ಇರಿಸಿದೆ.

ಇದನ್ನೂ ಓದಿ :ಜಾಗತಿಕವಾಗಿ ಮೇಡ್​-ಇನ್-ಇಂಡಿಯಾ ಐಫೋನ್​ ರಫ್ತು ಶೇ 20ರಷ್ಟು ಹೆಚ್ಚಳ ಸಾಧ್ಯತೆ

ABOUT THE AUTHOR

...view details