ಮುಂಬೈ :ಮಂಗಳವಾರದ ದಿನದ ಮಧ್ಯದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆ ಬೆಂಚ್ ಮಾರ್ಕ್ ಸೂಚ್ಯಂಕಗಳು ದಾಖಲೆಯ ಗರಿಷ್ಠ ಮಟ್ಟ ತಲುಪಿ ಏರಿಕೆಯೊಂದಿಗೆ ಕೊನೆಗೊಂಡವು. ಮಂಗಳವಾರ ಸೆನ್ಸೆಕ್ಸ್ 122.10 ಪಾಯಿಂಟ್ ಅಥವಾ ಶೇಕಡಾ 0.17 ರಷ್ಟು ಏರಿಕೆಯಾಗಿ 71,437.19 ಕ್ಕೆ ಕೊನೆಗೊಂಡಿದೆ ಮತ್ತು ನಿಫ್ಟಿ 34.40 ಪಾಯಿಂಟ್ ಅಥವಾ ಶೇಕಡಾ 0.16 ರಷ್ಟು ಏರಿಕೆಯಾಗಿ 21,453.10 ರಲ್ಲಿ ಕೊನೆಗೊಂಡಿದೆ.
ನಿಫ್ಟಿಯಲ್ಲಿ ನೆಸ್ಲೆ ಇಂಡಿಯಾ, ಟಾಟಾ ಕನ್ಸೂಮರ್, ಕೋಲ್ ಇಂಡಿಯಾ, ಪ್ರಾಡಕ್ಟ್ಸ್, ಎನ್ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ಲಾಭ ಗಳಿಸಿದರೆ ಟಿಸಿಎಸ್, ಹೀರೋ ಮೋಟೊಕಾರ್ಪ್, ಅದಾನಿ ಪೋರ್ಟ್ಸ್, ವಿಪ್ರೋ ಮತ್ತು ಯುಪಿಎಲ್ ನಷ್ಟ ಅನುಭವಿಸಿದವು. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಅಲ್ಪ ಲಾಭದೊಂದಿಗೆ ಮುಕ್ತಾಯಗೊಳ್ಳುವ ಮೊದಲು ಹೊಸ ದಾಖಲೆಯ ಗರಿಷ್ಠ 42,544.95 ಕ್ಕೆ ತಲುಪಿದರೆ, ಮಿಡ್ಕ್ಯಾಪ್ ಸೂಚ್ಯಂಕ ಶೇಕಡಾ 0.3 ರಷ್ಟು ಕುಸಿದಿದೆ.
ಕಳೆದ ವಾರ ಇತಿಹಾಸದಲ್ಲಿ ಮೊದಲ ಬಾರಿಗೆ ಸೆನ್ಸೆಕ್ಸ್ 71,000 ಅಂಕಗಳ ಗಡಿಯನ್ನು ತಲುಪಿದ್ದರೂ ಮಂಗಳವಾರದ ವಹಿವಾಟು ಬಹುತೇಕ ಏರಿಳಿತದಿಮದ ಕೂಡಿತ್ತು. ಆದಾಗ್ಯೂ, ಕೋಲ್ ಇಂಡಿಯಾ ಇಂದು ಶೇಕಡಾ 5.55 ರಷ್ಟು ಏರಿಕೆ ಕಂಡು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ಕಂಪನಿಯಾಗಿ ಹೊರಹೊಮ್ಮಿದೆ.
ವಿದೇಶಿ ಮಾರುಕಟ್ಟೆಗಳನ್ನು ನೋಡುವುದಾದರೆ - ಬ್ಯಾಂಕ್ ಆಫ್ ಜಪಾನ್ ತನ್ನ ಸಡಿಲ ವಿತ್ತೀಯ ನೀತಿಯನ್ನು ಉಳಿಸಿಕೊಂಡ ನಂತರ ಯೆನ್ ಡಾಲರ್ ವಿರುದ್ಧ ಕುಸಿದಿದ್ದರಿಂದ ಟೋಕಿಯೊ ಷೇರುಗಳು ಏರಿಕೆ ಕಂಡವು. ಬೆಂಚ್ ಮಾರ್ಕ್ ನಿಕ್ಕಿ-225 ಸೂಚ್ಯಂಕ ಶೇಕಡಾ 1.41 ಅಥವಾ 460.41 ಪಾಯಿಂಟ್ ಏರಿಕೆ ಕಂಡು 33,219.39 ಕ್ಕೆ ತಲುಪಿದ್ದರೆ, ವಿಶಾಲ ಟೋಪಿಕ್ಸ್ ಸೂಚ್ಯಂಕ ಶೇಕಡಾ 0.73 ಅಥವಾ 16.95 ಪಾಯಿಂಟ್ ಏರಿಕೆ ಕಂಡು 2,333.81ಕ್ಕೆ ತಲುಪಿದೆ.
ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಯೆಮೆನ್ನ ಇರಾನ್ ಬೆಂಬಲಿತ ಹೌತಿ ಉಗ್ರಗಾಮಿಗಳು ನಡೆಸಿದ ದಾಳಿಯಿಂದ ತೈಲ ಸರಬರಾಜಿನ ಮೇಲೆ ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಕೆಂಪು ಸಮುದ್ರದ ಮೂಲಕ ಸಾಗುವ ವಾಣಿಜ್ಯ ಸರಕು ರಕ್ಷಿಸಲು ಬಹುರಾಷ್ಟ್ರೀಯ ಒಕ್ಕೂಟ ರಚಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಮಂಗಳವಾರ ಘೋಷಿಸಿದೆ. ಯುನೈಟೆಡ್ ಕಿಂಗ್ಡಮ್, ಬಹ್ರೇನ್, ಕೆನಡಾ, ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್, ನಾರ್ವೆ, ಸೀಶೆಲ್ಸ್ ಮತ್ತು ಸ್ಪೇನ್ ಇದರಲ್ಲಿ ಭಾಗಿಯಾಗಿರುವ ರಾಷ್ಟ್ರಗಳಲ್ಲಿ ಸೇರಿವೆ.
ಈ ಬೆಳವಣಿಗೆಗಳ ಮಧ್ಯೆ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್ಗೆ 9 ಸೆಂಟ್ಸ್ ಏರಿಕೆಯಾಗಿ 78.04 ಡಾಲರ್ಗೆ ತಲುಪಿದೆ. ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ ಕಚ್ಚಾ ತೈಲವು ಶೇಕಡಾ 1 ರಷ್ಟು ಕುಸಿದು 72.46 ಡಾಲರ್ಗೆ ತಲುಪಿದೆ.
ಇದನ್ನೂ ಓದಿ : 2023-24ರಲ್ಲಿ ಭಾರತದ ಜಿಡಿಪಿ ಶೇ 6.3ರಷ್ಟು ಬೆಳವಣಿಗೆ; ಐಎಂಎಫ್ ಅಂದಾಜು