ಮುಂಬೈ:ಪಂಚರಾಜ್ಯಗಳ ಚುನಾವಣೆ ಫಲಿತಾಂಶ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧಾರಗಳು ಮುಂಬೈ ಷೇರು ಸೂಚ್ಯಂಕದ ಮೇಲೆ ಪರಿಣಾಮ ಬೀರಿವೆ. ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ (ಬಿಎಸ್ಇ) ಭರ್ಜರಿ ಏರಿಕೆ ಕಂಡಿತು. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 70,000 ಮೈಲಿಗಲ್ಲು ಮುಟ್ಟಿತು. ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಕೂಡ ಶರವೇಗದಲ್ಲಿ ಏರಿಕೆಯಾಗಿದ್ದು 21 ಸಾವಿರ ಅಂಕವನ್ನು ದಾಟಿತು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯನ್ನು ಕಂಡ ನಂತರ ಮತ್ತು ರೆಪೋ ದರಗಳನ್ನು ಯಥಾಸ್ಥಿತಿಯಲ್ಲಿಟ್ಟ ನಂತರ ಪ್ರಮುಖ ಸೂಚ್ಯಂಕಗಳು ಗರಿಷ್ಠ ಮಟ್ಟವನ್ನು ತಲುಪಿದ್ದವು. ಷೇರು ಮಾರುಕಟ್ಟೆ ಆರಂಭವಾದ ತಕ್ಷಣವೇ ಭಾರೀ ಏರಿಕೆ ಕಂಡ 30-ಷೇರುಗಳ ಸೆನ್ಸೆಕ್ಸ್ ತನ್ನ ಸಾರ್ವಕಾಲಿಕ ಗರಿಷ್ಠವಾದ 70,048.90 ಪಾಯಿಂಟ್‌ಗಳನ್ನು ದಾಖಲಿಸಿತು. ನಿಫ್ಟಿ- 50 ದಾಖಲೆಯ 21,019.80 ಪಾಯಿಂಟ್‌ಗಳಿಗೆ ಏರಿತು.
ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬ್‌ಗಳ ಮೇಲೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತದ (FDA) ಪ್ರತಿಕೂಲ ವರದಿಯಿಂದಾಗಿ ಫಾರ್ಮಾ ಷೇರುಗಳು ಕುಸಿದವು. ಇದರಿಂದ ಎರಡೂ ಸೂಚ್ಯಂಕಗಳು ತುಸು ನಷ್ಟಕ್ಕೀಡಾದವು. ಫಾರ್ಮಾ ಮೇಜರ್ ವಿರುದ್ಧ ಎಫ್‌ಡಿಎ ತನ್ನ ಪ್ರತಿಕೂಲ ವರದಿಯನ್ನು ನೀಡಿದ ನಂತರ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‌ನಲ್ಲಿ ಶೇಕಡಾ 6 ರಷ್ಟು ಕುಸಿತದಿಂದಾಗಿ ಫಾರ್ಮಾ ಷೇರುಗಳು ಶೇಕಡಾ 1 ರಷ್ಟು ಕುಸಿದವು. ನಿಫ್ಟಿ ಷೇರುಗಳು ಕೂಡ ಅಂಕ ನಷ್ಟಕ್ಕೀಡಾದವು. ಸದ್ಯ ಸೆನ್ಸೆಕ್ಸ್ 69,928 (102.93) ಅಂಕಗಳಿದ್ದರೆ, ನಿಫ್ಟಿ 20997.10 ರಲ್ಲಿ ( 27.7 ಅಂಕ) ವಹಿವಾಟು ನಡೆಸುತ್ತಿದೆ.