ಮುಂಬೈ: ರಿಸರ್ವ್ ಬ್ಯಾಂಕ್ ಬಡ್ಡಿ ದರಗಳಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡ ನಂತರ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ಸತತ ಎರಡನೇ ಅವಧಿಗೆ ಏರಿಕೆ ಕಂಡವು. ಹಣಕಾಸು, ರಿಯಾಲ್ಟಿ ಮತ್ತು ಆಟೋದಂತಹ ಕ್ಷೇತ್ರಗಳ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು. ಏಷ್ಯಾ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯು ಹೂಡಿಕೆದಾರರ ಭಾವನೆಯನ್ನು ಸಕಾರಾತ್ಮಕವಾಗಿಸಿದೆ ಎಂದು ಟ್ರೇಡರ್ಸ್ ತಿಳಿಸಿದ್ದಾರೆ.
30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 364.06 ಪಾಯಿಂಟ್ ಅಥವಾ ಶೇಕಡಾ 0.55 ರಷ್ಟು ಏರಿಕೆ ಕಂಡು 65,995.63 ಕ್ಕೆ ತಲುಪಿದೆ. ಇದು ದಿನದ ವಹಿವಾಟಿನಲ್ಲಿ 464.24 ಪಾಯಿಂಟ್ ಅಥವಾ ಶೇಕಡಾ 0.70 ರಷ್ಟು ಏರಿಕೆ ಕಂಡು 66,095.81 ಕ್ಕೆ ತಲುಪಿತ್ತು. ನಿಫ್ಟಿ 107.75 ಪಾಯಿಂಟ್ ಅಥವಾ ಶೇಕಡಾ 0.55 ರಷ್ಟು ಏರಿಕೆ ಕಂಡು 19,653.50 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಷೇರುಗಳ ಪೈಕಿ ಬಜಾಜ್ ಫಿನ್ ಸರ್ವ್ ಶೇ 6ರಷ್ಟು ಏರಿಕೆ ಕಂಡರೆ, ಬಜಾಜ್ ಫೈನಾನ್ಸ್ ಶೇ 4ರಷ್ಟು ಏರಿಕೆ ಕಂಡಿದೆ. ಟೈಟಾನ್ ಶೇ 2 98ರಷ್ಟು ಏರಿಕೆಯಾಗಿದ್ದು, ಇಂಡಸ್ಇಂಡ್ ಬ್ಯಾಂಕ್, ಐಟಿಸಿ, ಜೆಎಸ್ಡಬ್ಲ್ಯೂ ಸ್ಟೀಲ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಮಾರುತಿ ನಂತರದ ಸ್ಥಾನಗಳಲ್ಲಿವೆ. ಹಿಂದೂಸ್ತಾನ್ ಯೂನಿಲಿವರ್, ಏಷ್ಯನ್ ಪೇಂಟ್ಸ್, ಭಾರ್ತಿ ಏರ್ಟೆಲ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ನಷ್ಟ ಅನುಭವಿಸಿದವು.