ನವದೆಹಲಿ:ಕೋಲ್ ಇಂಡಿಯಾದ ಅಂಗಸಂಸ್ಥೆಯಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (ಎಸ್ಇಸಿಎಲ್) 2023-24ರ ಹಣಕಾಸು ವರ್ಷದಲ್ಲಿ ದಾಖಲೆಯ 100 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಿದೆ. ಛತ್ತೀಸಗಢ ಮೂಲದ ಈ ಕಂಪನಿಯು ಪ್ರಾರಂಭವಾದಾಗಿನಿಂದ ಸಾಧಿಸಿದ ಅತ್ಯಂತ ವೇಗದ 100 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆ ಇದಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ಪೂರೈಸುವ ಒಟ್ಟು ಕಲ್ಲಿದ್ದಲಿನ ಪೈಕಿ ಶೇಕಡಾ 80 ಕ್ಕಿಂತ ಹೆಚ್ಚು ವಿದ್ಯುತ್ ವಲಯಕ್ಕೆ ಹೋಗುತ್ತದೆ. ಕಂಪನಿಯು ಸುಮಾರು 81 ಮಿಲಿಯನ್ ಟನ್ ಕಲ್ಲಿದ್ದಲನ್ನು ದೇಶಾದ್ಯಂತದ ವಿದ್ಯುತ್ ಸ್ಥಾವರಗಳಿಗೆ ರವಾನಿಸಿದೆ.
ಕೊರ್ಬಾ ಜಿಲ್ಲೆಯಲ್ಲಿರುವ ಎಸ್ಇಸಿಎಲ್ನ ಮೆಗಾ ಯೋಜನೆಗಳಾದ ಗೆವ್ರಾ, ದಿಪ್ಕಾ ಮತ್ತು ಕುಸ್ಮುಂಡಾಗಳು ಒಟ್ಟು 100 ಮಿಲಿಯನ್ ಟನ್ ಕಲ್ಲಿದ್ದಲು ಪೂರೈಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ದೇಶದ ಅತಿದೊಡ್ಡ ಕಲ್ಲಿದ್ದಲು ಗಣಿಯಾದ ಗೆವ್ರಾ 30.3 ಮೆಟ್ರಿಕ್ ಟನ್, ದಿಪ್ಕಾ ಮತ್ತು ಕುಸ್ಮುಂಡಾ ಕ್ರಮವಾಗಿ 19.1 ಮೆಟ್ರಿಕ್ ಟನ್ ಮತ್ತು 25.1 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಉತ್ಪಾದನೆ ಮಾಡಿವೆ. ಒಟ್ಟು ಉತ್ಪಾದನೆಯಲ್ಲಿ ಎಲ್ಲಾ ಮೂರು ಮೆಗಾ ಯೋಜನೆಗಳ ಒಟ್ಟು ಪಾಲು ಶೇಕಡಾ 74 ಕ್ಕಿಂತ ಹೆಚ್ಚಾಗಿದೆ.