ಬೆಂಗಳೂರು: ಷೇರು ಮಾರುಕಟ್ಟೆ ನಿರ್ವಹಣೆ ಸುಗಮಕ್ಕಾಗಿ ಎಲ್ಲಾ ಹೂಡಿಕೆದಾರರು ತಮ್ಮ ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತಿಳಿಸಿದೆ.
ಕೆವೈಸಿ(KYC) ದೂರು: ಈ ಸಂಬಂಧ ಬುಧವಾರ ಹೇಳಿಕೆ ಹೊರಡಿಸಿರುವ ಸೆಬಿ, ಆಧಾರ್ ಸಂಖ್ಯೆ ಹೊಂದಿರದ ಅನುಸರಣೆಗಳನ್ನು ನಾನ್ ಕೆವೈಸಿ ದೂರುಗಳು ಎಂದು ಪರಿಗಣಿಸಲಾಗುವುದು. ಪ್ಯಾನ್ ಲಿಂಕ್ ಆಗುವವರೆಗೆ ಸೆಕ್ಯೂರಿಟಿ ಮತ್ತು ಇತರೆ ವಹಿವಾಟಿನ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಎಚ್ಚರಿಸಿದೆ.
ಈ ಸಂಬಂಧ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮಾರ್ಚ್ 2022ರಲ್ಲೇ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 31ರೊಳಗೆ ಪ್ಯಾನ್ಗೆ ಆಧಾರ್ ಲಿಂಕ್ ಮಾಡದೇ ಹೋದಲ್ಲಿ ಅವರ ಪ್ಯಾನ್ ಅನ್ನು ಆದಾಯ ತೆರಿಗೆ ಕಾಯ್ದೆ 1961ರ ಅಡಿಗೆ ನಿಷ್ಕ್ರೀಯಗೊಳಿಸಲಾಗುವುದು ಎಂದು ತಿಳಿಸಿದೆ.
ವಹಿವಾಟಿಗೆ ಅವಶ್ಯಕ ಪ್ಯಾನ್: ಸೆಕ್ಯೂರಿಟಿ ಮಾರುಕಟ್ಟೆಯಲ್ಲಿ ಎಲ್ಲಾ ವಹಿವಾಟುಗಳಿಗೆ ಪ್ಯಾನ್ ಪ್ರಮುಖವಾಗಿದೆ. ಸೆಬಿ ನೋಂದಾಯಿತ ಘಟಕಗಳು ಮತ್ತು ಮಾರುಕಟ್ಟೆ ಮೂಲ ಸೌಕರ್ಯ ಸಂಸ್ಥೆಗಳಲ್ಲಿ ಭಾಗವಹಿಸಲು ಕೆವೈಸಿ ಬೇಕೇ ಬೇಕು.
ಈಗಾಗಲೇ ಇರುವ ಹೂಡಿಕೆದಾರರು ಕೂಡ ಮಾರ್ಚ್ 31ರೊಳಗೆ ಪ್ಯಾನ್ನೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಅವಶ್ಯಕವಾಗಿದೆ. ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ನಿರಂತರ ಮತ್ತು ಸುಗಮ ವಹಿವಾಟುಗಳಿಗೆ ಇದು ಅತೀ ಅಗತ್ಯ. ಇದರ ಜೊತೆಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ನಿಯಮ ಪಾಲನೆ ಕಡ್ಡಾಯವೂ ಹೌದು.
ಪ್ಯಾನ್ ಕಾರ್ಡ್ ನಿಷ್ಕ್ರೀಯ ಸಾಧ್ಯತೆ: ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳು ಪ್ಯಾನ್ ಅನ್ನು ನಿಗದಿಪಡಿಸಿದ ನಿಗದಿತ ಪ್ರಾಧಿಕಾರಕ್ಕೆ ತಿಳಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ದಿನದೊಳಗೆ ಈ ಕಾರ್ಯ ಮಾಡದೇ ಹೋದಲ್ಲಿ ಹೂಡಿಕೆದಾರರ ಪ್ಯಾನ್ ನಿಷ್ಕ್ರೀಯವಾಗುತ್ತದೆ. ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವುದರಿಂದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗದು. ಆದಾಯ ತೆರಿಗೆ ರಿಟರ್ನ್ಸ್ ಈಗಾಗಲೇ ಸಲ್ಲಿಸಿದ್ದರೂ ಬಾಕಿ ಇರುವ ರಿಟರ್ನ್ಸ್ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ. ಈಗಾಗಲೇ ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ ಅಥವಾ ಮರುಪಾವತಿಗಾಗಿ ಕಾಯುತ್ತಿದ್ದರೆ, ಬಾಕಿ ಮರುಪಾವತಿಗಳು ಬರುವುದಿಲ್ಲ.
ಗಡುವು ವಿಸ್ತರಿಸಿದ ಸೆಬಿ: ಇದೇ ವೇಳೆ ಸೆಬಿ ಮಂಗಳವಾರ ಮ್ಯೂಚುವಲ್ ಫಂಡ್ಗಳು, ಆಸ್ತಿ ನಿರ್ವಹಣಾ ಕಂಪನಿಗಳು ಮತ್ತು ಟ್ರಸ್ಟಿ ಘಟಕಗಳಿಗೆ ಫೋರೆನ್ಸಿಕ್ ಆಡಿಟರ್ಗಳ ಎಂಪನೆಲ್ಮೆಂಟ್ಗಾಗಿ ಅರ್ಜಿಗಳನ್ನು ಸಲ್ಲಿಸಲು ಮಾರ್ಚ್ ಅಂತ್ಯದವರೆಗೆ ಸಮಯ ವಿಸ್ತರಿಸಿದೆ. ಇಎಸ್ಜಿ ರೇಟಿಂಗ್ ಪೂರೈಕೆದಾರರ ಮೇಲಿನ ಪ್ರಸ್ತಾವಿತ ನಿಯಂತ್ರಕ ಚೌಕಟ್ಟಿನ ಕುರಿತು ಸಾರ್ವಜನಿಕ ಕಾಮೆಂಟ್ಗಳನ್ನು ಸಲ್ಲಿಸಲು ಮಾರ್ಚ್ 15 ರವರೆಗೆ ಟೈಮ್ಲೈನ್ ಕೊಟ್ಟಿದೆ. ಈ ಹಿಂದೆ ಇದಕ್ಕೆ ಫೆ. 22ರವರೆಗೆ ಗಡುವು ನೀಡಲಾಗಿತ್ತು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ: ಕೇಂದ್ರದ ಅಧಿಸೂಚನೆ