ಮುಂಬೈ: ಸಾಮ್ಹಿ ಹೋಟೆಲ್ಸ್ ಮತ್ತು ಜೈಪುರ ಮೂಲದ ರಿಟೇಲ್ ಆಭರಣ ಕಂಪನಿ ಮೋತಿಸನ್ ಜ್ಯುವೆಲ್ಲರ್ಸ್ಗಳಿಗೆ ಆರಂಭಿಕ ಸಾರ್ವಜನಿಕ ಕೊಡುಗೆ ಅಂದರೆ ಐಪಿಒ ಮೂಲಕ ಬಂಡವಾಳ ಸಂಗ್ರಹಿಸಲು ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಸೆಪ್ಟೆಂಬರ್ 5 ರಂದು ಹಸಿರು ನಿಶಾನೆ ತೋರಿಸಿದೆ. ಈ ವರ್ಷದ ಮಾರ್ಚ್ನಲ್ಲಿ ಎರಡೂ ಸಂಸ್ಥೆಗಳು ತಮ್ಮ ಪ್ರಾಥಮಿಕ ದಾಖಲೆಗಳನ್ನು ಸೆಬಿಗೆ ಮರು ಸಲ್ಲಿಸಿದ್ದವು ಮತ್ತು ಆಗಸ್ಟ್ 28-31 ರ ಅವಧಿಯಲ್ಲಿ ಅದರ ವೀಕ್ಷಣಾ ಪತ್ರಗಳನ್ನು ಪಡೆದಿವೆ ಎಂದು ಸೆಬಿ ಮಾಹಿತಿ ನೀಡಿದೆ. ಸೆಬಿ ಪರಿಭಾಷೆಯಲ್ಲಿ ನೋಡುವುದಾದರೆ ಅದರ ಅವಲೋಕನವು ಐಪಿಒ ಪ್ರಾರಂಭಿಸಲು ಅನುಮತಿ ನೀಡಿರುವುದನ್ನು ಸೂಚಿಸುತ್ತದೆ.
ಕರಡು ದಾಖಲೆಗಳ ಪ್ರಕಾರ, ಸಾಮ್ಹಿ ಹೋಟೆಲ್ಸ್ 1,000 ಕೋಟಿ ರೂ.ಗಳ ಈಕ್ವಿಟಿ ಷೇರುಗಳ ಹೊಸ ವಿತರಣೆ ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ 90 ಲಕ್ಷ ಈಕ್ವಿಟಿ ಷೇರುಗಳ ಆಫರ್ ಫಾರ್ ಸೇಲ್ (ಒಎಫ್ಎಸ್) ಒಳಗೊಂಡ ಐಪಿಒ ಅನ್ನು ಪ್ರಸ್ತಾಪಿಸಿದೆ. ಪ್ರಸ್ತಾವಿತ ಒಎಫ್ಎಸ್ ಬ್ಲೂ ಚಂದ್ರ ಪ್ರೈವೇಟ್ ಲಿಮಿಟೆಡ್ನ 42.36 ಲಕ್ಷ ಈಕ್ವಿಟಿ ಷೇರುಗಳು, ಗೋಲ್ಡ್ಮನ್ ಸ್ಯಾಚ್ಸ್ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ಸ್ (ಏಷ್ಯಾ) ಲಿಮಿಟೆಡ್ನ 24.78 ಲಕ್ಷ ಈಕ್ವಿಟಿ ಷೇರುಗಳು, ಜಿಟಿಐ ಕ್ಯಾಪಿಟಲ್ ಆಲ್ಫಾ ಪ್ರೈವೇಟ್ ಲಿಮಿಟೆಡ್ನ 15.47 ಲಕ್ಷ ಈಕ್ವಿಟಿ ಷೇರುಗಳು ಮತ್ತು ಇಂಟರ್ ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ನ 7.39 ಲಕ್ಷ ಈಕ್ವಿಟಿ ಷೇರುಗಳ ಮಾರಾಟವನ್ನು ಒಳಗೊಂಡಿದೆ.
ಇದು ಲಿಸ್ಟಿಂಗ್ ನಿಯಮಗಳನ್ನು ಪಾಲಿಸುವ ಸಲುವಾಗಿ ಅಸ್ತಿತ್ವದಲ್ಲಿರುವ ಷೇರುದಾರರ ಭಾಗಶಃ ನಿರ್ಗಮನವಾಗಿದೆ. ಕಂಪನಿಯು ಸೆಪ್ಟೆಂಬರ್ 2019 ರಲ್ಲಿ ತನ್ನ ಐಪಿಒ ದಾಖಲೆಗಳನ್ನು ಸೆಬಿಗೆ ಸಲ್ಲಿಸಿತ್ತು ಮತ್ತು ಆರಂಭಿಕ ಷೇರು ಮಾರಾಟವನ್ನು ಪ್ರಾರಂಭಿಸಲು 2019 ರ ನವೆಂಬರ್ನಲ್ಲಿ ಮಾರುಕಟ್ಟೆ ನಿಯಂತ್ರಕರ ಅನುಮೋದನೆಯನ್ನು ಪಡೆದಿತ್ತು. ಆದರೆ ಕಂಪನಿಯು ಐಪಿಒ ಆರಂಭಿಸಿರಲಿಲ್ಲ. ಹೊಸ ಐಪಿಒದಿಂದ ಬರಲಿರುವ ನಿರೀಕ್ಷಿತ 750 ಕೋಟಿ ರೂ. ನಿವ್ವಳ ಆದಾಯವನ್ನು ಸಾಲ ಪಾವತಿಗೆ ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸುವುದಾಗಿ ಸಂಸ್ಥೆ ತಿಳಿಸಿದೆ.