ನವದೆಹಲಿ:ಟಾಟಾ ಸನ್ಸ್ನ ಕಾರ್ಯಕಾರಿ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕಿದ ಟಾಟಾ ಸಮೂಹದ ನಿರ್ಧಾರವನ್ನು ಎತ್ತಿಹಿಡಿದ 2021ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಶಪೂರ್ಜಿ ಪಲ್ಲೊಂಜಿ ಗ್ರೂಪ್ (ಎಸ್ಪಿ ಗ್ರೂಪ್) ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ. ಈ ಮೂಲಕ ಮತ್ತೆ ಟಾಟಾ ಸಮೂಹದ ಅಧ್ಯಕ್ಷರಾಗಲು ಬಯಸಿದ ಸೈರಸ್ ಮಿಸ್ತ್ರಿಗೆ ಭಾರಿ ಹಿನ್ನಡೆ ಉಂಟಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವು ಮಾರ್ಚ್ 2021ರ ತೀರ್ಪಿನಲ್ಲಿ ಸೈರಸ್ ಮಿಸ್ತ್ರಿ ವಿರುದ್ಧ ಮಾಡಿದ ಕೆಲವು ಟೀಕೆಗಳನ್ನು ಅಳಿಸಿ ಹಾಕಲು ಆದೇಶಿಸಿದೆ.
100 ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಕಂಪನಿಗೆ ಸೈರಸ್ ಮಿಸ್ತ್ರಿ ಅವರನ್ನು ಮತ್ತೆ ನೇಮಕ ಮಾಡಬೇಕು ಎಂದು ಎನ್ಸಿಎಲ್ಎಟಿ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ತಡೆಹಿಡಿದಿತ್ತು. ಈ ಆದೇಶದ ವಿರುದ್ಧ ಶಪೂರ್ಜಿ ಪಲ್ಲೊಂಜಿ ಗ್ರೂಪ್ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಇದೀಗ ಆ ಅರ್ಜಿಯನ್ನೂ ಕೋರ್ಟ್ ವಜಾ ಮಾಡಿದೆ.
ಮಿಸ್ತ್ರಿ ಅವರು 2012 ರಲ್ಲಿ ರತನ್ ಟಾಟಾ ಅವರ ನಂತರ ಟಿಎಸ್ಪಿಎಲ್ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆದರೆ, ನಾಲ್ಕು ವರ್ಷಗಳ ನಂತರ ಅವರನ್ನು ಪದಚ್ಯುತಗೊಳಿಸಲಾಯಿತು.
ಓದಿ:ನೈರುತ್ಯ ರೈಲ್ವೆಯಿಂದ ಮತ್ತೊಂದು ಸಾಧನೆ: ಮೊದಲ ಬಾರಿಗೆ ರೈಲಿನಲ್ಲಿ 32 ಬಸ್ಗಳ ಸಾಗಣೆ