ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಶುಕ್ರವಾರ ಎಂಸಿಎಲ್ಆರ್ ಮಾರ್ಜಿನಲ್ ವೆಚ್ಚ ಅಥವಾ ಬಡ್ಡಿದರವನ್ನು ಆಯ್ದ ಅವಧಿಗಳಿಗೆ 5 ರಿಂದ 10 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಇದರಿಂದ ಗೃಹ ಸಾಲ, ಕಾರು ಸಾಲ ಮತ್ತು ವೈಯಕ್ತಿಕ ಸಾಲದ ಇಎಂಐ ಹೆಚ್ಚಾಗಲಿವೆ. ವಾಹನ ಅಥವಾ ಗೃಹ ಸಾಲಗಳು ಮತ್ತಷ್ಟು ದುಬಾರಿಯಾಗಲಿವೆ.
ಪ್ರಸ್ತುತ ಎಸ್ಬಿಐನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (ಎಂಸಿಎಲ್ಆರ್) ಹೆಚ್ಚಳವು ಈಗ ಶೇಕಡಾ 8 ರಿಂದ 8.85 ರ ನಡುವೆ ಇದೆ. ಹೊಸ ದರಗಳು ಡಿಸೆಂಬರ್ 15ರಿಂದಲೇ ಜಾರಿಗೆ ಬಂದಿವೆ.
15 ದಿನಗಳ ಎಂಸಿಎಲ್ಆರ್ ದರವನ್ನು ಶೇಕಡಾ 8ಕ್ಕೆ ನಿಗದಿಪಡಿಸಲಾಗಿದ್ದು, ಒಂದು ತಿಂಗಳು ಮತ್ತು ಮೂರು ತಿಂಗಳ ಅವಧಿಯ ದರಗಳನ್ನು ಶೇಕಡಾ 8.15ರಿಂದ ಶೇಕಡಾ 8.20ಕ್ಕೆ ಹೆಚ್ಚಿಸಲಾಗಿದೆ. ಎಸ್ಬಿಐ ದೇಶದ ಮುಂಚೂಣಿ ಬ್ಯಾಂಕ್ ಆಗಿರುವುದರಿಂದ ಇತರ ಬ್ಯಾಂಕುಗಳು ಸಹ ಇದನ್ನೇ ಅನುಸರಿಸುವ ಸಾಧ್ಯತೆಯಿದ್ದು, ಆ ಬ್ಯಾಂಕ್ಗಳ ಬಡ್ಡಿದರಗಳು ಕೂಡ ಹೆಚ್ಚಾಗಬಹುದು.
ವೆನೆಜುವೆಲಾದಿಂದ ತೈಲ ಖರೀದಿ: ಲ್ಯಾಟಿನ್ ಅಮೆರಿಕ ದೇಶವಾಗಿರುವ ವೆನೆಜುವೆಲಾದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ ಭಾರತವು ಆ ದೇಶದಿಂದ ಕಚ್ಚಾ ತೈಲ ಖರೀದಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದ್ದಾರೆ. "ನಿರ್ಬಂಧವಿಲ್ಲದ ಯಾವುದೇ ದೇಶದಿಂದ ತೈಲ ಖರೀದಿಸಲು ಭಾರತ ಸಿದ್ಧವಾಗಿದೆ ಮತ್ತು ವೆನೆಜುವೆಲಾ ತೈಲ ಮಾರುಕಟ್ಟೆಗೆ ಬಂದರೆ ನಾವು ಅದನ್ನು ಸ್ವಾಗತಿಸುತ್ತೇವೆ" ಎಂದು ಪುರಿ ಸುದ್ದಿಗಾರರಿಗೆ ತಿಳಿಸಿದರು.
ಇಂಡಿಯನ್ ಆಯಿಲ್ನ ಪಾರಾದೀಪ್ ಘಟಕ ಸೇರಿದಂತೆ ಅನೇಕ ಸಂಸ್ಕರಣಾಗಾರಗಳು ವೆನೆಜುವೆಲಾದ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿವೆ ಎಂದು ಅವರು ಹೇಳಿದರು. ವೆನೆಜುವೆಲಾದ ತೈಲ ಮತ್ತು ಅನಿಲ ಯೋಜನೆಗಳಲ್ಲಿ ಮಾಡಲಾದ ಹೂಡಿಕೆಗಳ ಮೇಲೆ ಓಎನ್ಜಿಸಿಗೆ ಬರಬೇಕಿದ್ದ 500 ಮಿಲಿಯನ್ ಡಾಲರ್ ಲಾಭಾಂಶ ಬಾಕಿ ಉಳಿದಿದೆ ಎಂದು ಅವರು ತಿಳಿಸಿದರು.
ರಷ್ಯಾದ ತೈಲಕ್ಕೆ ಬೇಡಿಕೆ ಕಡಿಮೆ ಮಾಡುವ ಕಾರ್ಯತಂತ್ರದ ಭಾಗವಾಗಿ ವಾಶಿಂಗ್ಟನ್ ಅಕ್ಟೋಬರ್ನಲ್ಲಿ ವೆಬೆಜುವೆಲಾ ಮೇಲಿನ ನಿರ್ಬಂಧಗಳನ್ನು ತಗೆದು ಹಾಕಿದೆ. ಅದರ ನಂತರ ಇಂಡಿಯನ್ ಆಯಿಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ನಂಥ ಭಾರತೀಯ ಸಂಸ್ಕರಣಾ ಕಂಪನಿಗಳು ಈಗಾಗಲೇ ವೆನೆಜುವೆಲಾದಿಂದ ತೈಲ ಖರೀದಿಸಲು ಪ್ರಾರಂಭಿಸಿವೆ.
ಇದನ್ನೂ ಓದಿ: ಸ್ವಿಗ್ಗಿ- 2023: ಈ ವರ್ಷವೂ ಬಿರಿಯಾನಿಯೇ ಟಾಪ್ ಟ್ರೆಂಡಿಂಗ್: ಕೇಕ್ ಕ್ಯಾಪಿಟಲ್ ಬೆಂಗಳೂರು!