ಹೈದರಾಬಾದ್ :ಯೌವನದಲ್ಲಿರುವ ಧೈರ್ಯದ ಮುಂದೆ ಯಾವುದೂ ಸಾಟಿಯಲ್ಲ. ಆಗ ಏನು ಬೇಕಾದರೂ ಮಾಡಬಲ್ಲೆ, ಅಂದುಕೊಂಡಿದ್ದನ್ನು ಸಾಧಿಸಬಲ್ಲೆ ಎಂಬ ಹುಮ್ಮಸ್ಸಿರುತ್ತದೆ. ಯುವಕರಾಗಿದ್ದಾಗ ಕುಟುಂಬದ ಜವಾಬ್ದಾರಿಗಳು ಜಾಸ್ತಿ ಇರುವುದಿಲ್ಲ. ಹೀಗಾಗಿ ಆದಾಯ ಕಮ್ಮಿ ಇದ್ದರೂ ಅಂಥ ಕಷ್ಟವೇನೂ ಆಗಲ್ಲ. ಆದರೆ ಆವಾಗಲೇ ಮುಂದಿನ ಜೀವನಕ್ಕಾಗಿ ಹಣಕಾಸು ಯೋಜನೆಗಳನ್ನು ಸೂಕ್ತವಾಗಿ ಪ್ಲ್ಯಾನ್ ಮಾಡಬೇಕಾಗುತ್ತದೆ. ಹಾಗೆ ಮಾಡಿದರೆ ಮಾತ್ರ ನೀವು ದುಡಿಯುವ ದುಡ್ಡು ಕೂಡ ನಿಮಗಾಗಿ ದುಡಿಯಲಾರಂಭಿಸುತ್ತದೆ. ನಿಮ್ಮ ದುಡ್ಡು ನಿಮಗೆ ಸಂಪತ್ತು ಸೃಷ್ಟಿಸುತ್ತದೆ. ಹಾಗಾದರೆ ಜೀವನದಲ್ಲಿ ಹಣಕಾಸು ಪ್ಲ್ಯಾನಿಂಗ್ ಮಾಡುವುದು ಹೇಗೆ ತಿಳಿಯೋಣ ಬನ್ನಿ.
ನಮ್ಮದು ಯುವಕರ ರಾಷ್ಟ್ರ. ದೇಶದ ಶೇ 65 ರಷ್ಟು ಜನಸಂಖ್ಯೆ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು. ಆದರೆ, ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನವರು ಕಾಳಜಿ ವಹಿಸುವುದಿಲ್ಲ ಎಂದು ವರದಿಗಳು ಹೇಳುತ್ತವೆ. ಏನೇ ಆದರೂ ಜೀವನದಲ್ಲಿ ಹಣಕಾಸು ಯೋಜನೆಯಂಥ ಒಳ್ಳೆಯ ಅಭ್ಯಾಸಗಳನ್ನು ಆದಷ್ಟು ಬೇಗ ಆರಂಭಿಸಬೇಕು. ಓದುವಾಗ ನಾವು ನಮ್ಮ ತಂದೆ ತಾಯಿಯ ಮೇಲೆ ಅವಲಂಬಿತರಾಗಿರುತ್ತೇವೆ. ಆದರೆ ಗಳಿಸಲು ಪ್ರಾರಂಭಿಸಿದ ನಂತರ, ನೀವು ಗಳಿಸುವ ಪ್ರತಿ ರೂಪಾಯಿಯನ್ನು ಖರ್ಚು ಮಾಡುವ ಮೊದಲು ನೀವು ಎಚ್ಚರಿಕೆಯಿಂದ ಯೋಚಿಸಬೇಕು.
ಮೊದಲ ಸಂಬಳದ ಸಮಯದಿಂದಲೇ 50:50 ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದು ಬೆಸ್ಟ್. ನಿಮ್ಮ ಆದಾಯದ ಶೇಕಡಾ 50 ರಷ್ಟನ್ನು ಉಳಿತಾಯಕ್ಕಾಗಿ ಮೀಸಲಿಡಿ. ಇನ್ನುಳಿದ ಅರ್ಧ ಹಣದಲ್ಲಿ ಮೊದಲು ಅಪಾಯ ಮುಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಬಳಿ ಹಣ ಸಂಗ್ರಹವಾಗಲಾರಂಭಿಸುತ್ತದೆ. ನಿಮ್ಮ ಹಣಕಾಸಿನ ಗುರಿಗಳು ಮತ್ತು ಎಷ್ಟು ಅಪಾಯಕ್ಕೆ ಒಡ್ಡಿಕೊಳ್ಳಬಹುದು ಎಂಬ ಬಗ್ಗೆ ನೀವು ತಿಳಿವಳಿಕೆಯನ್ನು ಹೊಂದಿದ್ದರೆ, ನೀವು ಹೆಚ್ಚಿನ ಆದಾಯ ನೀಡುವ ಯೋಜನೆಗಳತ್ತ ನೋಡಬಹುದು.
ನಿಮ್ಮ ಹಣಕಾಸಿನ ಗುರಿಗಳನ್ನು ಸ್ಪಷ್ಟವಾಗಿ ನಿರ್ಧರಿಸಿಕೊಳ್ಳಿ. ಹೂಡಿಕೆಯು ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದಾಗ ಮಾತ್ರ ಆ ಯೋಜನೆ ದೀರ್ಘಕಾಲ ಉಳಿಯುತ್ತದೆ. ಇಲ್ಲವಾದರೆ ಶುರು ಮಾಡಿ ಮಧ್ಯದಲ್ಲಿ ನಿಲ್ಲಿಸುವುದು ಅಭ್ಯಾಸವಾಗುತ್ತದೆ. ಆದ್ದರಿಂದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಗಳನ್ನು ಗುರುತಿಸಿ. ಅವುಗಳನ್ನು ಸಾಧಿಸಲು, ಸೂಕ್ತವಾದ ಹೂಡಿಕೆ ಮಾರ್ಗಗಳನ್ನು ಆಯ್ಕೆಮಾಡಿ ಮತ್ತು ಹೂಡಿಕೆಯನ್ನು ಪ್ರಾರಂಭಿಸಿ. ಅಗತ್ಯವಿರುವಷ್ಟು ಬೇಗ ನಗದಾಗಿ ಪರಿವರ್ತಿಸುವ ಯೋಜನೆಗಳನ್ನು ಆಯ್ಕೆ ಮಾಡಲು ಹಲವರು ಬಯಸುತ್ತಾರೆ. ಅಲ್ಪಾವಧಿಯ ಗುರಿಗಳಿಗೆ ಇವು ಸೂಕ್ತವಾಗಿವೆ.