ಸಿಯೋಲ್:ದಟ್ಟ ಕಾಡು, ಗುಡ್ಡಗಾಡು ಪ್ರದೇಶ, ತೀರಾ ಹಿಂದುಳಿದ ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ ಹೇಳತೀರದು. ಇದನ್ನು ಹೋಗಲಾಡಿಸಲು ದಕ್ಷಿಣ ಕೊರಿಯಾದ ಮೊಬೈಲ್ ದೈತ್ಯ ಸ್ಯಾಮ್ಸಂಗ್ ತನ್ನ ಮುಂಬರುವ ಗ್ಯಾಲಕ್ಸಿ ಮೊಬೈಲ್ಗಳಲ್ಲಿ ಉಪಗ್ರಹ ಸಂಪರ್ಕ ಅಳವಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇದರಿಂದ ನೆಟ್ವರ್ಕ್ ಇಲ್ಲದೆಯೂ ಸ್ಯಾಟ್ಲೈಟ್ ಮೂಲಕವೇ ತುರ್ತು ಕರೆ ಮಾಡಬಹುದಾಗಿದೆ.
ಸ್ಯಾಮ್ಸಂಗ್ ರೂಪಿಸುತ್ತಿರುವ Galaxy S23 ಸ್ಮಾರ್ಟ್ಫೋನ್ನಲ್ಲಿ ಈ ವೈಶಿಷ್ಟ್ಯವು ಲಭ್ಯವಿರುತ್ತದೆಯೇ ಎಂಬುದು ಸ್ಪಷ್ಟತೆ ಸಿಕ್ಕಿಲ್ಲವಾದರೂ, ಈ ವಿಧಾನವನ್ನು ಮೊಬೈಲ್ನಲ್ಲಿ ಅಳವಡಿಸಿದರೆ ಉಪಗ್ರಹದ ಸಹಾಯದಿಂದ ಯಾವುದೇ ಸೆಲ್ಯುಲಾರ್ ಕಂಪನಿಯ ಸಿಗ್ನಲ್ ಕವರೇಜ್ ಇಲ್ಲದೆಯೂ ಬಳಕೆದಾರರು ತುರ್ತು ಕರೆಗಳನ್ನು ಮಾಡಬಹುದು. ಇದನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ S23 ಸ್ಮಾರ್ಟ್ಫೋನ್ನಲ್ಲಿ ಅಳವಡಿಸುವ ಸಾಧ್ಯತೆಯನ್ನು ತಳ್ಳಿ ಹಾಕುವುಂತಿಲ್ಲ.
ಇನ್ನೊಂದು ಮೊಬೈಲ್ ದೈತ್ಯ ಕಂಪನಿಯಾದ ಆ್ಯಪಲ್ ಐಫೋನ್ 14 ಸರಣಿಯ ಮೊಬೈಲ್ನಲ್ಲಿ ಸ್ಯಾಟಲೈಟ್ ನೆಟ್ವರ್ಕ್ ಅನ್ನು ಪರಿಚಯಿಸಿದೆ. ಸದ್ಯಕ್ಕೆ ಇದು ಅಮೆರಿಕ ಮತ್ತು ಕೆನಡಾದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಈ ವರ್ಷದ ಕೊನೆಯಲ್ಲಿ ಈ ವಿಧಾನವನ್ನು ವಿಶ್ವದ ಇತರ ದೇಶಗಳಿಗೂ ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ ಎಂದು ಹೇಳಲಾಗಿದೆ.