ಹೊಸದಿಲ್ಲಿ:ಭಾರತಕ್ಕೆ ಕಚ್ಚಾ ತೈಲ ಪೂರೈಕೆಯ ಟ್ರೆಂಡ್ ಮುಂದುವರಿಯಲಿದ್ದು, ದ್ವಿಪಕ್ಷೀಯ ವ್ಯಾಪಾರವು ಹೊಸ ದಾಖಲೆಗಳನ್ನು ಸೃಷ್ಟಿಸಲಿದೆ ಎಂದು ಭಾರತದಲ್ಲಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ.
ಭಾರತವು ಗ್ರಾಹಕನಾಗಿರುವುದರಿಂದ ಸ್ವಾಭಾವಿಕವಾಗಿ ಅಗ್ಗದ ಸರಕುಗಳನ್ನು ಹುಡುಕುತ್ತಿದೆ ಮತ್ತು ರಷ್ಯಾ ಯುರೋಪ್‌ನಲ್ಲಿ ತನ್ನ ಸಾಂಪ್ರದಾಯಿಕ ಮಾರುಕಟ್ಟೆಗಳನ್ನು ಕಳೆದುಕೊಂಡಿರುವುದರಿಂದ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಿದೆ. ಹಾಗಾಗಿ ಲಭ್ಯವಿರುವ ಆಯ್ಕೆಗಳು ಮತ್ತು ಲಭ್ಯವಿರುವ ಅವಕಾಶಗಳು ಇಂಧನ ಕ್ಷೇತ್ರದಲ್ಲಿ ನಮ್ಮ ವ್ಯಾಪಾರ ಮತ್ತು ಸಂಬಂಧಗಳನ್ನು ವೃದ್ಧಿಸುತ್ತಿವೆ. ಈ ಟ್ರೆಂಡ್ ರಚನಾತ್ಮಕ ಮಾದರಿಯಲ್ಲಿ ಮುಂದುವರಿಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಅಲಿಪೋವ್ ತಿಳಿಸಿದರು.
ಈ ವರ್ಷಾಂತ್ಯಕ್ಕೆ ಇಂಧನ ಮಾರುಕಟ್ಟೆಗಳು ಹೇಗಿರಲಿವೆ ಎಂಬುದು ಯಾರಿಗೂ ಗೊತ್ತಿಲ್ಲ. ದೀರ್ಘಾವಧಿ ವ್ಯವಸ್ಥೆಗಳು ಮತ್ತು ಒಪ್ಪಂದಗಳ ಆಧಾರದಲ್ಲಿ ಮಾತುಕತೆ ಮತ್ತು ಸಹಕಾರಗಳನ್ನು ಮುಂದುವರಿಸುವ ಮೂಲಕ ಈ ಕ್ಷೇತ್ರದಲ್ಲಿ ನಮ್ಮ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸಲು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ಒಂದು ಅಂದಾಜಿನ ಪ್ರಕಾರ, ಭಾರತಕ್ಕೆ ರಷ್ಯಾದ ತೈಲ ರಫ್ತಿನಲ್ಲಿ ಭಾರಿ ಹೆಚ್ಚಳವಾಗಿದೆ. ಇದು ಈ ವರ್ಷ ಹತ್ತು ಪಟ್ಟು ಹೆಚ್ಚಾಗಿದೆ ಮತ್ತು ರಷ್ಯಾದ ಕಚ್ಚಾ ತೈಲವು ಈಗ ಭಾರತ ಆಮದು ಮಾಡಿಕೊಳ್ಳುವ ತೈಲ ಬಳಕೆಯ ಶೇಕಡಾ ಹತ್ತರಷ್ಟನ್ನು ಪೂರೈಸುತ್ತಿದೆ.
ಹಿಂದಿನ ವರ್ಷದಲ್ಲಿ ನಮ್ಮ ವ್ಯಾಪಾರ ವಹಿವಾಟುಗಳು 13.6 ಬಿಲಿಯನ್ ಡಾಲರ್ ಆಗಿದ್ದು ದಾಖಲೆಯಾಗಿತ್ತು. ಆದರೆ ಈ ವರ್ಷ ಮುಗಿಯುವುದರೊಳಗೆ ನಾವು ಆ ದಾಖಲೆಯನ್ನು ಬಹುಶಃ ಮುರಿದು ಹೊಸ ದಾಖಲೆ ಬರೆಯಲಿದ್ದೇವೆ ಎಂದು ರಷ್ಯಾ ರಾಯಭಾರಿ ವಿಶ್ವಾಸ ವ್ಯಕ್ತಪಡಿಸಿದರು.