ಮುಂಬೈ :ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 6 ಪೈಸೆಗಳಷ್ಟು ಏರಿಕೆಯಾಗಿ 82.54 ಗೆ ತಲುಪಿದೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ಬೆಳವಣಿಗೆಗಳು ಮತ್ತು ವಿದೇಶಿ ನಿಧಿಗಳ ಒಳಹರಿವುಗಳ ಕಾರಣದಿಂದ ರೂಪಾಯಿ ಬಲಗೊಂಡಿದೆ. ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ರಿಪಬ್ಲಿಕನ್ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ ನಡುವಿನ ಯುಎಸ್ ಸಾಲದ ಸೀಲಿಂಗ್‌ನ ಒಪ್ಪಂದಕ್ಕಾಗಿ ವಿದೇಶೀ ವಿನಿಮಯ ವ್ಯಾಪಾರಿಗಳು ಕಾಯುತ್ತಿರುವ ಮಧ್ಯೆ ಡಾಲರ್ ಸೂಚ್ಯಂಕವು 104 ಮಟ್ಟದಲ್ಲಿ ಬಹುತೇಕ ಸ್ಥಿರವಾಗಿದೆ.
ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ದೇಸಿ ಕರೆನ್ಸಿ ರೂಪಾಯಿ ಡಾಲರ್ ವಿರುದ್ಧ 82.57 ನಲ್ಲಿ ಬಲವಾಗಿ ವಹಿವಾಟು ಆರಂಭಿಸಿತು ಮತ್ತು 82.51 ರ ಅತ್ಯುನ್ನತ ಮಟ್ಟವನ್ನು ತಲುಪಿತು. ನಂತರ ಅದು 82.54 ಕ್ಕೆ ಕುಸಿಯಿತು. ಈ ಮೂಲಕ ರೂಪಾಯಿ ಹಿಂದಿನ ದಿನದ ಮುಕ್ತಾಯಕ್ಕಿಂತ 6 ಪೈಸೆಯ ಲಾಭ ದಾಖಲಿಸಿತು. ಶುಕ್ರವಾರ ಯುಎಸ್ ಕರೆನ್ಸಿ ಎದುರು ರೂಪಾಯಿ 82.60 ಕ್ಕೆ ಕೊನೆಗೊಂಡಿತ್ತು.
ಭಾರತೀಯ ಕರೆನ್ಸಿಯು ಯುಎಸ್ ಕರೆನ್ಸಿಯ ವಿರುದ್ಧ 82.25 ಮಟ್ಟವನ್ನು ತಲುಪುವ ಸಾಧ್ಯತೆಯಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಮಾರುಕಟ್ಟೆ ತಂತ್ರಜ್ಞ ಆನಂದ್ ಜೇಮ್ಸ್ ಹೇಳಿದ್ದಾರೆ. 82.70 ಕ್ಕಿಂತ ಮೇಲೆ ಹೋಗುವ ಸಾಮರ್ಥ್ಯವಿಲ್ಲದ ಕಾರಣದಿಂದ ರೂಪಾಯಿ ಮೌಲ್ಯ ಮತ್ತೆ 82.45 ಕ್ಕೆ ಇಳಿಕೆಯಾಗುವ ಅಪಾಯವಿದೆ. 82.45ಕ್ಕೆ ಇಳಿಕೆಯಾದೆ ನಂತರ 82.2ಕ್ಕೂ ಇಳಿಕೆಯಾಗಬಹುದು. ಹೀಗಾಗಿ ನಾವು ಜಾಗರೂಕರಾಗಿ ವಹಿವಾಟು ನಡೆಸುವುದು ಒಳಿತು ಎಂದು ಜೇಮ್ಸ್ ಹೇಳಿದರು.