ಮುಂಬೈ:ರೂಪಾಯಿ ಡಾಲರ್ ವಿರುದ್ಧ ಮಂಡಿಯೂರಿದೆ. ಇಂದಿನ ವಹಿವಾಟಿನಲ್ಲಿ ಬರೋಬ್ಬರಿ 60 ಪೈಸೆ ಕುಸಿತ ಕಾಣುವ ಮೂಲಕ ಸಾರ್ವಕಾಲಿಕ ಇಳಿಕೆ ದಾಖಲಿಸಿದೆ. US ಡಾಲರ್ ವಿರುದ್ಧವಾಗಿ 77.50ಕ್ಕೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಜಾಗತಿಕ ಹಣಕಾಸು ಸಂಸ್ಥೆಗಳಲ್ಲಿನ ಬಡ್ಡಿ ದರ ಏರಿಕೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಏರಿಕೆ ಹಾಗೂ ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ರೂಪಾಯಿ ತನ್ನ ಮೌಲ್ಯ ಕಳೆದುಕೊಂಡಿದೆ ಎಂದು ತಿಳಿದು ಬಂದಿದೆ.
ದಿನದ ವಹಿವಾಟಿನ ಅವಧಿಯಲ್ಲಿ ಡಾಲರ್ ವಿರುದ್ಧ ರೂಪಾಯಿ ಜೀವಮಾನದ ಕನಿಷ್ಠ ಮಟ್ಟವಾದ 77.52 ಅನ್ನು ಮುಟ್ಟಿತ್ತು. ಶುಕ್ರವಾರ ರೂಪಾಯಿ 55 ಪೈಸೆ ಕುಸಿದು 76.90ಕ್ಕೆ ತಲುಪಿತ್ತು. ಕಳೆದ ಎರಡು ವಹಿವಾಟು ಅವಧಿಗಳಲ್ಲಿ, ಗ್ರೀನ್‌ಬ್ಯಾಕ್ ವಿರುದ್ಧ ರೂಪಾಯಿ 115 ಪೈಸೆ ಕಳೆದುಕೊಂಡಂತಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ: ಡಾಲರ್ ಎದುರು ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 77.50 ರೂ.ದ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 75 ವರ್ಷಗಳಲ್ಲಿ ಮೊದಲ ಬಾರಿಗೆ ರೂಪಾಯಿ ಐಸಿಯುನಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ದ್ವಂದ್ವ ನೀತಿ, ಧಾರ್ಮಿಕ ಸಂಘರ್ಷ ಮತ್ತು ಮಿತಿ ಮೀರಿದ ಭ್ರಷ್ಟಾಚಾರ ರೂಪಾಯಿ 'ಐಸಿಯು'ಗೆ ಹೋಗಲು ಕಾರಣವಾಗಿದೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ. ದೇಶದಲ್ಲಿ ಹಣದುಬ್ಬರ ಏರುತ್ತಲೇ ಸಾಗಿದೆ. ಜನ ಬೆಲೆ ಏರಿಕೆಯಿಂದ ಹೈರಾಣಾಗಿದ್ದಾರೆ. ಹೀಗಾಗಿ ಜನರು ಆರ್ಥಿಕತೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ:ಎಲ್ಐಸಿ ಐಪಿಒ ಮಾರಾಟ ಮುಕ್ತಾಯ : ಗ್ರಾಹಕರಿಂದ ಭಾರಿ ಬೇಡಿಕೆ, ದುಪ್ಪಟ್ಟು ಹೂಡಿಕೆ