ಮುಂಬೈ:ಡಾಲರ್ ಎದುರು ಸತತವಾಗಿ ದುರ್ಬಲಗೊಂಡು ತೀವ್ರ ನಷ್ಟ ಅನುಭವಿಸಿದ್ದ ರೂಪಾಯಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 8 ಪೈಸೆಯಷ್ಟು ಹೆಚ್ಚಳವಾಗಿ ಚೇತರಿಕೆ ದಾಖಲಿಸಿದೆ. ಸದ್ಯ ಡಾಲರ್ ಎದುರು ಭಾರತದ ರೂಪಾಯಿ 81.25 ರಷ್ಟಿದೆ.
2 ದಿನಗಳ ಹಿಂದೆ ರೂಪಾಯಿ ಮೌಲ್ಯ ಡಾಲರ್ ಎದುರು 7 ಪೈಸೆ ಇಳಿಕೆಯಾಗಿ 81.33ಕ್ಕೆ ಕುಸಿದಿತ್ತು. ಇಂದು ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ 81.26 ರಲ್ಲಿ ವಹಿವಾಟು ಆರಂಭಿಸಿತು. ನಂತರ ಅದು 81.25 ಕ್ಕೆ ತಲುಪಿ ಅತ್ಯಲ್ಪ ಚೇತರಿಕೆ ಕಂಡಿತು. ಆರಂಭಿಕ ವಹಿವಾಟು ಮುಕ್ತಾಯಕ್ಕೂ ಮೊದಲು ರೂಪಾಯಿ 8 ಪೈಸೆಯಷ್ಟು ಏರಿಕೆಯನ್ನು ದಾಖಲಿಸಿತು.
ಈ ಮಧ್ಯೆ ವಿವಿಧ ರಾಷ್ಟ್ರಗಳ ಆರು ಕರೆನ್ಸಿಗಳ ಮುಂದೆ ಡಾಲರ್ ಶೇಕಡಾ 0.37 ರಷ್ಟು ಕುಸಿದು 104.15 ಕ್ಕೆ ತಲುಪಿದೆ. ವಿದೇಶಿ ವಿನಿಮಯ ವ್ಯಾಪಾರಿಗಳು ದೇಶೀಯ ಷೇರುಗಳ ಮೇಲೆ ಹೂಡಿಕೆ ಹೆಚ್ಚಿಸಿದ ಕಾರಣ ರೂಪಾಯಿ ತುಸು ಏರಿಕೆ ಕಂಡಿದೆ.