ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಗಳು ನಿನ್ನೆಗೆ ಹೋಲಿಸಿದರೆ ಇಂದು ಮತ್ತಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ನಷ್ಟವುಂಟಾಗಿದೆ. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಮತ್ತೆ ಹೊಸದಾಗಿ ಪಾಲಿಸಿ ರೇಟ್ಗಳನ್ನು ಹೆಚ್ಚಿಸುವ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಕುಸಿಯುತ್ತಿವೆ ಎನ್ನಲಾಗಿದೆ.
ಆರಂಭಿಕ ವಹಿವಾಟಿನಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 0.8 ರಿಂದ 0.9 ರ ಮಧ್ಯೆ ವಹಿವಾಟು ನಡೆಸಿದವು. ಅಮೆರಿಕದಲ್ಲಿ ಹಣಕಾಸು ನೀತಿಗಳನ್ನು ಮತ್ತಷ್ಟು ಬಿಗಿಗೊಳಿಸುತ್ತಿರುವುದರಿಂದ ಹೂಡಿಕೆದಾರರು ಉತ್ತಮ ಮತ್ತು ಸ್ಥಿರ ಆದಾಯಕ್ಕಾಗಿ ಅಮೆರಿಕ ಮಾರುಕಟ್ಟೆಗಳತ್ತ ಹೋಗುವ ಸಾಧ್ಯತೆಗಳಿವೆ.
ರೂಪಾಯಿ ಕುಸಿತ: ಇನ್ನು ಭಾರತದ ರೂಪಾಯಿ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಡಾಲರ್ ವಿರುದ್ಧ ಮತ್ತೊಂದು ಐತಿಹಾಸಿಕ ಕುಸಿತ ಕಂಡಿದೆ. ಡಾಲರ್ ವಿರುದ್ಧ 25 ಪೈಸೆ ಇಳಿಕೆಯೊಂದಿಗೆ ವಹಿವಾಟು ಆರಂಭಿಸಿದ ರೂಪಾಯಿ ದಾಖಲೆಯ 81.09 ಗೆ ಕುಸಿಯಿತು. ಗುರುವಾರ ರೂಪಾಯಿ ಮೌಲ್ಯ 80.86 ಆಗಿತ್ತು. ರೂಪಾಯಿ ಮೌಲ್ಯದಲ್ಲಿ ನಿನ್ನೆಯ ಇಳಿಕೆಯು ಫೆಬ್ರವರಿ 24 ರ ನಂತರ ಒಂದೇ ದಿನದಲ್ಲಾದ ಅತಿ ಹೆಚ್ಚು ಇಳಿಕೆಯಾಗಿದೆ.